ಬೆಂಗಳೂರು: ಬೆಂಗಳೂರು ಪಶ್ಚಿಮ ವಲಯ ಮತ್ತು ಮಹಾದೇವಪುರದಲ್ಲಿ ಕೋವಿಡ್-19 ಪ್ರಕರಣಗಳ ಬಗ್ಗೆ ಬಿಬಿಎಂಪಿ ಮತ್ತು ಆರೋಗ್ಯಾಧಿಕಾರಿಗಳು ನಿಗಾ ವಹಿಸಿದ್ದಾರೆ. ಈ ವಲಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದು ಮಾತ್ರವಲ್ಲದೇ, ಬ್ರಿಟನ್ ನಿಂದ ಆಗಮಿಸಿರುವ ಅಧಿಕ ಸಂಖ್ಯೆಯ ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.
ಬಿಬಿಎಂಪಿ ದಾಖಲೆಗಳ ಪ್ರಕಾರ, ಬ್ರಿಟನ್ ನಿಂದ ಆಗಮಿಸಿದ 14 ಜನರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದಿದೆ.ಇದರಲ್ಲಿ ಮಹಾದೇವಪುರ ವಲಯದಲ್ಲಿ ಐದು ಮತ್ತು ಬೆಂಗಳೂರು ಪಶ್ಚಿಮ ವಲಯದಲ್ಲಿ ನಾಲ್ಕು ಜನರಲ್ಲಿ ಸೋಂಕು ದೃಢಪಟ್ಟಿದೆ.
ಮಹಾದೇವಪುರ ವಲಯದ 38 ಜನರು ಹಾಗೂ ಪಶ್ಚಿಮ ವಲಯದ 26 ಜನರ ಪರೀಕ್ಷಾ ವರದಿಯನ್ನು ಕಾಯಲಾಗುತ್ತಿದೆ. ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿ ಹೆಚ್ಚು 91 ಪರೀಕ್ಷೆಗಳನ್ನು ಮಾಡಲಾಗಿದ್ದು, ಬಿಬಿಎಂಪಿ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ.
ಇತರ ಕಡೆಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದರೆ, ಬೆಂಗಳೂರು ಪಶ್ಚಿಮ, ಮಹಾದೇವಪುರ ಮತ್ತು ರಾಜರಾಜೇಶ್ವರಿ ನಗರದಲ್ಲಿ ದಿಢೀರನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡುಬಂದಿರುವುದರಿಂದ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊರಗಿನಿಂದ ಬರುವವರ ಸಂಖ್ಯೆಯೂ ಹೆಚ್ಚಾಗಿದ್ದು, ಪರೀಕ್ಷೆ ಮತ್ತು ಐಸೋಲೇಷನ್ ಗಾಗಿ ಕಮ್ಯೂನಿಟಿ ಸೆಂಟರ್ ನಂತಹ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ಎಲ್ಲಿ ಪರೀಕ್ಷೆ ಮಾಡಿ, ಮಾಹಿತಿ ನೀಡಬಹುದು ಎಂಬುದರ ಬಗ್ಗೆ ಚರ್ಚಿಸಲಾಗುತ್ತಿದೆ. 110 ಹಳ್ಳಿಗಳು, ನಗರಸಭೆ, ಪುರಸಭೆ ಪ್ರದೇಶಗಳತ್ತ ವಿಶೇಷ ಗಮನ ನೀಡಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಈ ಹಿಂದೆ ಹಲವು ನಿವಾಸಿಗಳು ಸಹ ಸಲಹೆ, ಅಭಿಪ್ರಾಯಗಳನ್ನು ನೀಡಿದ್ದು, ಅವುಗಳನ್ನು ಸಹ ಇದೀಗ ಪರಿಶೀಲಿಸುತ್ತಿರುವುದಾಗಿ ಬಿಬಿಎಂಪಿ ಅಧಿಕಾರಿ ಹೇಳಿದ್ದಾರೆ.