ರಾಜ್ಯ

'ನನ್ನ ಸ್ನೇಹಿತ ನನ್ನನ್ನು ಬಿಟ್ಟು ಹೋಗಿದ್ದಾರೆ, ಈ ದಿನವನ್ನು ನಾನು ಮರೆಯಲು ಸಾಧ್ಯವೇ ಇಲ್ಲ': ಹೆಚ್.ಡಿ. ಕುಮಾರಸ್ವಾಮಿ ಕಣ್ಣೀರು

Sumana Upadhyaya

ಬೆಂಗಳೂರು: ವಿಧಾನ ಪರಿಷತ್ ಉಪ ಸಭಾಪತಿ ಹಾಗೂ ಜೆಡಿಎಸ್ ನಾಯಕ ಎಸ್ ಎಲ್ ಧರ್ಮೇಗೌಡ ನಿಧನಕ್ಕೆ ಹೆಚ್ ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ.

ಇಂದು ಬೆಂಗಳೂರಿನ ಜೆ.ಪಿ.ನಗರದಲ್ಲಿ ತಮ್ಮ ನಿವಾಸದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿ, ಧರ್ಮೇಗೌಡ ನನ್ನ ಒಡಹುಟ್ಟಿದ ಸೋದರನಂತೆ. ಅವರ ತಂದೆ ನನಗೆ ಒಂದು ಮಾತು ಹೇಳಿದ್ದರು, ನಾನಂತೂ ಮಂತ್ರಿ ಆಗಲಿಲ್ಲ, ನಾನು ಬದುಕಿರುವಾಗಲೇ ನನ್ನ ಪುತ್ರ ಮಂತ್ರಿ ಆಗಬೇಕೆಂದಿದ್ದರು.

ಆದರೆ ಮಂತ್ರಿ ಆಗಲಿಲ್ಲ, ಸಿದ್ದರಾಮಯ್ಯ ಜೊತೆ ಕಾಂಗ್ರೆಸ್ ಗೆ ಹೋಗಲು ನಿರ್ಧರಿಸಿದ್ದರು. ಆಗ ನಾನು ಹೆಚ್ ಡಿಕೆ ಬೇಕಾ, ಎಂಎಲ್ ಎ ಸ್ಥಾನ ಬೇಕಾ ಎಂದು ಕೇಳಿದ್ದೆ, ಆ ಮಾತು ಕೇಳಿ ಅವರು ತಮ್ಮ ನಿರ್ಧಾರ ಬದಲಿಸಿ ಜೆಡಿಎಸ್ ನಲ್ಲಿಯೇ ಉಳಿದುಕೊಂಡರು ಎಂದು ಅಂದಿನ ಘಟನೆ ನೆನೆದು ಭಾವುಕರಾಗಿ ಕಣ್ಣೀರು ಹಾಕಿದರು.

ಇದೇ ವೇಳೆ ಕೆಲ ದಿನಗಳ ಹಿಂದೆ ವಿಧಾನ ಪರಿಷತ್ ನಲ್ಲಿ ನಡೆದ ಘಟನಾವಳಿಗಳನ್ನು ನೆನೆದು ಧರ್ಮೇಗೌಡರು ನೊಂದಿದ್ದರು, ಅದನ್ನು ಪದೇ ಪದೇ ಪ್ರಸ್ತಾಪಿಸುತ್ತಿದ್ದರು ಎಂದು ನೆನಪಿಸಿಕೊಂಡ ಕುಮಾರಸ್ವಾಮಿ ರಾಜಕಾರಣದ ಸ್ಥಿತಿಗತಿ ಹಾಗೂ ಇಂದಿನ ನಾಯಕರುಗಳ ಬಗ್ಗೆಯೂ ಮಾತುಗಳನ್ನಾಡಿದರು. ಇದೊಂದು ರೀತಿಯಲ್ಲಿ ರಾಜಕಾರಣದ ಕೊಲೆ ಎಂದು ಸಹ ಆರೋಪಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಸಮೀಪ ರೈಲ್ವೆ ಹಳಿಗೆ ತಲೆಕೊಟ್ಟು ವಿಧಾನ ಪರಿಷತ್ ಉಪಸಭಾಪತಿ 65 ವರ್ಷದ ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು ಡೆತ್ ನೋಟು ಕೂಡ ಸಿಕ್ಕಿದೆ. 
ಅವರು ಪತ್ನಿ ಹಾಗೂ ಇಬ್ಬರು ಮಕ್ಕಳು, ಅಳಿಯನನ್ನು ಅಗಲಿದ್ದಾರೆ.

SCROLL FOR NEXT