ರಾಜ್ಯ

ಸಿಇಟಿ: ಜನವರಿ 15ರವರೆಗೂ ಕಾಲಾವಕಾಶಕ್ಕೆ ಎಐಸಿಟಿಇ ಮನವಿ

Manjula VN

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ಮಾಡುವ ಅಗತ್ಯ ಇದ್ದು, ಜನವರಿ 15ರವರೆಗೆ ಅವಕಾಶ ನೀಡಬೇಕು ಎಂದು ಕೋರಿ ಉನ್ನತ ಶಿಕ್ಷಣ ಇಲಾಖೆಯು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಲಿ (ಎಐಸಿಟಿಇ) ಅಧ್ಯಕ್ಷರಿಗೆ ಪತ್ರ ಬರೆದಿದೆ.

ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಉಳಿದಿರುವ ವೃತ್ತಿಪರ ಕೋರ್ಸ್ ಗಳ ಸೀಟ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಮತ್ತೊಂದು ಸಲ, ಕೊನೆಯದಾಗಿ ಅವಕಾಶ ನೀಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಇದರ ಜೊತೆಗೆ, ಕರ್ನಾಟಕ ಅನುದಾನರಹಿತ ಖಾಸಗಿ ಶೈಕ್ಷಣಿಕ ಕಾಲೇಜುಗಳ ಸಂಸ್ಥೆ (ಕೆಯುಪಿಇಸಿಎ) ಕೂಡ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ ವಿದ್ಯಾರ್ಥಿಗಳ ಪ್ರವೇಶಕ್ಕೆ ಜನವರಿ 15ರವರೆಗೆ ಕಾಲಾವಕಾಶ ವಿಸ್ತರಿಸಲು ಕೋರಿದೆ. ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪತ್ರ ಬರೆಯಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಈ ಹಿಂದಿನ ಅನುಮತಿಯ ಪ್ರಕಾರ ವೃತ್ತಿಪರ ಕೋರ್ಸ್ ಗೆ ಪ್ರವೇಶ ಪಡೆಯಲು 31-12- 2020 ಕೊನೆಯ ದಿನವಾಗಿದೆ. ಆದರೆ ಯುಜಿ ಸಿಇಟಿ ಮಾಪ್ ಅಪ್ ಸುತ್ತಿನಲ್ಲಿ ಎಂಜಿನಿಯರಿಂಗ್ ಸೀಟು ಪಡೆದಿದ್ದ ಕೆಲವು ವಿದ್ಯಾರ್ಥಿಗಳು, ಸೀಟು ಹಿಂಪಡೆದು ಶುಲ್ಕ ಮರುಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ಸೋಮವಾರ ಪೋಷಕರೊಂದಿಗೆ ಪ್ರತಿಭಟನೆ ನಡೆಸಿದ್ದರು.

“ಎಂಜಿನಿಯರಿಂಗ್ ಬದಲು ಆಯುಷ್, ಬಿ.ಎಸ್ಸಿ,z     ಬಿ.ಕಾಂ., ಅಥವಾ ಇನ್ನಿತರ ಕೋರ್ಸ್ ಗಳನ್ನು ಓದಲು ಇಚ್ಛಿಸುತ್ತೇವೆ. ಆಯುಷ್ ಕೋರ್ಸ್  ಗಳಿಗೆ ಇನ್ನೂ ಕೌನ್ಸೆಲಿಂಗ್ ನಡೆಸಿಲ್ಲ. ಆದ್ದರಿಂದ ಎಂಜಿನಿಯರಿಂಗ್ ಸೀಟು ಹಿಂದಕ್ಕೆ ಪಡೆದು ಅನುಕೂಲವಾಗುತ್ತದೆ” ಎಂದೂ ವಿದ್ಯಾರ್ಥಿಗಳು ಹೇಳಿದ್ದರು.

SCROLL FOR NEXT