ರಾಜ್ಯ

ಬೆಂಗಳೂರಿನ ಎರಡು ಆಸ್ಪತ್ರೆಗಳಲ್ಲಿ ಕೊರೋನ ವೈರಸ್ ಮಾದರಿಗಳ ಪರೀಕ್ಷಾ ಕೇಂದ್ರ ಸ್ಥಾಪನೆ

Lingaraj Badiger

ಬೆಂಗಳೂರು: ದೇಶದಲ್ಲಿ ಕೊರೋನ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಎರಡು ಆಸ್ಪತ್ರೆಗಳಲ್ಲಿ ವೈರಸ್ ನ ಮಾದರಿಗಳನ್ನು ಪರೀಕ್ಷಿಸುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಇದುವರೆಗೆ ವೈರಸ್ ನ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆಯ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆಗೆ ಕಳುಹಿಸಲಾಗುತ್ತಿತ್ತು.
ಶಂಕಿತ ಕೊರೊನಾವೈರಸ್ ರೋಗಿಗಳ ರಕ್ತದ ಮಾದರಿಗಳನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ನಿಮ್ಹಾನ್ಸ್ ಬಳಿಯಿರುವ ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ ಶಾಖೆಗೆ ಕಳುಹಿಸಲಾಗುವುದು. ವೈರಸ್ ಪರೀಕ್ಷೆಗೆ ಎರಡೂ ಕೇಂದ್ರಗಳು ಸಂಪೂರ್ಣವಾಗಿ ಸಜ್ಜುಗೊಂಡಿವೆ.

ಕೊರೋನ ವೈರಸ್‍ಗೆ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ 25 ಆಸ್ಪತ್ರೆಗಳಲ್ಲಿ ಐಸೋಲೇಶನ್ ವಾರ್ಡ್‍ಗಳನ್ನು ಸ್ಥಾಪಿಸಲಾಗಿದೆ. ಕೇಂದ್ರ ಸರ್ಕಾರ ಕಾಲಕಾಲಕ್ಕೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸುತ್ತಿದೆ.

ರಾಜೀವ್‍ಗಾಂಧಿ ಆಸ್ಪತ್ರೆಯಲ್ಲಿ 15 ಹಾಸಿಗೆಗಳು, ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಪ್ರತ್ಯೇಕ (ಐಸೋಲೇಶನ್) ವಾರ್ಡ್‍ಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲೂ ಐದು ಹಾಸಿಗೆಗಳ ಪ್ರತ್ಯೇಕ ವಾರ್ಡ್‍ಗಳನ್ನು ತೆರೆಯಲು ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಾರ್ಡ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT