ರಾಜ್ಯ

'ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ವರದಿ ಫಲಶ್ರುತಿ: ಸರ್ಕಾರಿ ಕೆಲಸ ಮತ್ತೆ ಗಿಟ್ಟಿಸಿಕೊಂಡ ಪ್ಯಾರಾಲಿಂಪಿಕ್ ಚಾಂಪಿಯನ್ 

Sumana Upadhyaya

ಬೆಂಗಳೂರು: ಇದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿಯ ಫಲಶ್ರುತಿ. ಪ್ಯಾರಾಲಿಂಪಿಕ್ ಬ್ಯಾಡ್ಮಿಂಟನ್ ಚಿನ್ನದ ಪದಕ ವಿಜೇತ ಚೇತನ್.ಆರ್ ಗೆ ವಿಧಾನಸೌಧದಲ್ಲಿ ಮತ್ತೆ ಕೆಲಸ ಸಿಕ್ಕಾಗ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ವಿಶ್ವ ಡ್ವಾರ್ಫ್(ಕುಬ್ಜ) ಪಂದ್ಯ ಚ್ಯಾಂಪಿಯನ್ ಚೇತನ್ ಕುರಿತು ನವೆಂಬರ್ 21,2019ರಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು.


ಪತ್ರಿಕೆಯಲ್ಲಿ ವರದಿ ಬಂದಿದ್ದನ್ನು ನೋಡಿ ಸರ್ಕಾರದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಕರೆ ಮಾಡಿ ಹಳೆ ದಾಖಲೆಗಳೊಂದಿಗೆ ಬಯೋಡೇಟಾ ಕಳುಹಿಸುವಂತೆ ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ ಮಣಿವಣ್ಣನ್, ಈ ಘಟನೆ ದುರದೃಷ್ಟಕರ, ಚೇತನ್ ನ ದಾಖಲೆಗಳು ಸರಿಯಾಗಿದ್ದರೆ ಖಂಡಿತಾ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.


ಚೇತನ್ ನ ಮಾಹಿತಿ ವಿಭಾಗದ ಮಾಧ್ಯಮ ಕೇಂದ್ರದ ಟೆಲಿಗ್ರಾಮ್ ವಿಭಾಗದಲ್ಲಿ ಕೆಲಸ ನೀಡಲಾಗಿತ್ತು. ಹಾಸನ ಮೂಲದ ರೈತನ ಮಗ ಚೇತನ್ ಮೂಲತಃ ಕ್ರೀಡಾಪಟು. ಆದರೆ ಹಾರ್ಮೋನ್ ಸಮಸ್ಯೆಯಿಂದಾಗಿ ದೇಹ ಬೆಳೆಯುವುದು ಕುಂಠಿತವಾಯಿತು. ಬೆನ್ನುಹುರಿ ಗಾಯವಾಗಿ ನಂತರ ಆಟವಾಡುವುದನ್ನು ಕೂಡ ನಿಲ್ಲಿಸಿದರು. ಇಷ್ಟೆಲ್ಲಾ ಕಷ್ಟಗಳ ಮಧ್ಯೆ 2019ರ ಮಾರ್ಚ್ ತಿಂಗಳಲ್ಲಿ ರಾಜ್ಯ ಮಾಹಿತಿ ವಿಭಾಗದಲ್ಲಿ ಸಹಾಯಕ ಮಾಹಿತಿ ಅಧಿಕಾರಿಯಾಗಿ ಕೆಲಸ ಸಿಕ್ಕಿತು. ಆದರೆ ಕಳೆದ ಜುಲೈಯಲ್ಲಿ ಸರ್ಕಾರ ಬದಲಾದಾಗ ಚೇತನ್ ನ ಕೆಲಸ ಕೂಡ ಕಳೆದುಹೋಯಿತು.


ನಂತರ ಕೆಲಸಕ್ಕಾಗಿ ಸರ್ಕಾರದ ಇಲಾಖೆಯಿಂದ ಇಲಾಖೆಗೆ ಅಲೆದರು. ಆದರೂ ಫಲ ಕೊಡಲಿಲ್ಲ. ನಂತರ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಇವರಿಗೆ ಆದ ಅನ್ಯಾಯದ ಬಗ್ಗೆ ವರದಿ ಬಂದಾಗ ಅದನ್ನು ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳು ನೋಡಿ ಮತ್ತೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ.

SCROLL FOR NEXT