ರಾಜ್ಯ

ರಾಜ್ಯದಲ್ಲಿ ನೀರಿನ‌ ನಿರ್ವಹಣೆ ವ್ಯವಸ್ಥಿತವಾಗಿಲ್ಲ, ಸುರಕ್ಷಿತ ನೀರು ಪೂರೈಕೆಯಾಗುತ್ತಿಲ್ಲ:ಗೋವಿಂದ ಎಂ ಕಾರಜೋಳ  

Sumana Upadhyaya

ಬೆಂಗಳೂರು: ರಾಜ್ಯದಲ್ಲಿ 35 ಸಾವಿರ ಕೆರೆಗಳಿದ್ದರೂ ಅವುಗಳ ನೀರು ಸುರಕ್ಷಿತವಾಗಿಲ್ಲ. ನೀರಿನ ನಿರ್ವಹಣೆ ಸರಿಯಾಗಿಲ್ಲದ ಕಾರಣ ಸಾರ್ವಜನಿಕರಿಗೆ ಸುಸ್ಥಿತ ಹಾಗೂ ಶುದ್ದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ವಿಷಾದ ವ್ಯಕ್ತಪಡಿಸಿದರು.


ಬೆಂಗಳೂರಿನಲ್ಲಿ ಅವರು ನಿನ್ನೆ ಕಾನ್ಪೆಡರೇಷನ್ ಆಫ್ ವುವೆನ್ಸ್ ಚೇಂಬರ್ಸ್ ಆಫ್ ಕಾಮರ್ಸ್ ಆಯೋಜಿಸಿದ್ದ ರಾಷ್ಟ್ರೀಯ ಸುರಕ್ಷಿತ ನೀರು ಮತ್ತು ನೈರ್ಮಲ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸರ್ ಎಂ . ವಿಶ್ವೇಶ್ವರಯ್ಯ ಅವರ ತವರೂರಾದ ಕೋಲಾರ ಜಿಲ್ಲೆಯಲ್ಲಿ ಅತೀ ಹೆಚ್ಚು 2,500 ಕೆರೆಗಳಿವೆ.ಕೆರೆಯ ತೀರ ಪ್ರದೇಶಗಳನ್ನು  ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕೆರೆ ನಾಶವಾಗುತ್ತಿವೆ. ಹೂಳು ತುಂಬಿಕೊಂಡಿದೆ ಎಂದರು.


ಭೂಮಿಯ ಮೇಲ್ಭಾಗದಲ್ಲಿರುವ ನೀರು ಶುದ್ದವಾಗಿರುತ್ತದೆ. ಕೊಳವೆ ಬಾವಿ ನೀರು ಪರಿಶುದ್ದವಾಗಿರುವುದಿಲ್ಲ. ಜಲಾನಯನ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು. ಭೂಮಿಯಲ್ಲಿ ಕಲ್ಮಶಗಳನ್ನು ಹೊರಹಾಕುವಂತೆ ನಿರ್ಮಿಸಬೇಕು. ಹಳ್ಳಗಳನ್ನು ಸ್ವಚ್ಚಗೊಳಿಸಬೇಕು. ಅರಣ್ಯ, ಕೃಷಿ, ತೋಟಗಾರಿಕೆ ಇಲಾಖೆಗಳು ಜಲಾನಯನ ಅಭಿವೃದ್ಧಿ ಕಾಮಗಾರಿಗಳನ್ನು ಒಂದೇ ಕಡೆ ಕೈಗೊಳ್ಳುತ್ತಿವೆ. ಪ್ರತಿ ಜಿಲ್ಲೆಗೊಂದು ಮಾದರಿ ಗ್ರಾಮವನ್ನು ಆಯ್ಕೆ ಮಾಡಿ ಮಳೆ ನೀರು ಕೊಯ್ಲು ಅಳವಡಿಕೆ ಮತ್ತು ಬಯಲು ಬಹಿರ್ದೆಸೆ ಮುಕ್ತ ಮಾಡುವಂತೆ ಜನಜಾಗೃತಿ ಮೂಡಿಸಬೇಕು. ಇದಕ್ಕೆ ಸರ್ಕಾರ ಸಹಭಾಗಿತ್ವವಾಗಲಿದೆ ಎಂದರು. 


ಕೇಂದ್ರ ಸರ್ಕಾರ 3.68 ಲಕ್ಷ ಕೋಟಿ ರೂಪಾಯಿಗಳನ್ನು ನೀರಾವರಿ ಮತ್ತು ಕುಡಿಯುವ ನೀರು ಪೂರೈಕೆಗಾಗಿ ಬಜೆಟ್ ನಲ್ಲಿ ಮೀಸಲಿಟ್ಟಿದ್ದು, ರಾಜ್ಯದ ಯೋಜನೆಗಳಿಗೆ ಶೇಕಡಾ50ರಷ್ಟು ಅನುದಾನ ನೀಡಲಿದೆ‌. ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.


ರಾಜ್ಯದಲ್ಲಿ 48 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದರೂ ಜನತೆ ಅವುಗಳನ್ನು ಪೂರ್ಣಪ್ರಮಾಣದಲ್ಲಿ ಬಳಸುತ್ತಿಲ್ಲ. ಸ್ಥಳೀಯ ಜನಪ್ರತಿಗಳ ಸಹಭಾಗಿತ್ವದೊಂದಿಗೆ ಸಾರ್ವಜನರಿಗೆ ಜಾಗೃತಿ ಮೂಡಿಸಬೇಕು.ಶುದ್ದ ಕುಡಿಯುವ ನೀರು ಮತ್ತು ನೈರ್ಮಲ್ಯದಿಂದ ಆರೋಗ್ಯ ಸುರಕ್ಷಿತವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

SCROLL FOR NEXT