ರಾಜ್ಯ

ಪೊಲೀಸ್ ಚೌಕಿಗೆ ಐಶಾರಾಮಿ ಲ್ಯಾಂಬೋರ್ಗಿನಿ ಕಾರು ಢಿಕ್ಕಿ; ಚಾಲಕ ವಶಕ್ಕೆ

Srinivasamurthy VN

ಬೆಂಗಳೂರು: ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣ ಎದುರಿನ ಸಿಟಿಓ ವೃತ್ತದಲ್ಲಿದ್ದ ಪೊಲೀಸ್‌ ಚೌಕಿಗೆ ‘ಲ್ಯಾಂಬೊರ್ಗಿನಿ’ ಕಾರು ಡಿಕ್ಕಿ ಹೊಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನ ಚಾಲಕನನ್ನು ಕೊನೆಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣ ಎದುರಿನ ಮಿನ್ಸ್ ಸ್ಕ್ವೇರ್ ನ ಸಿಟಿಓ ವೃತ್ತದಲ್ಲಿದ್ದ ಪೊಲೀಸ್‌ ಚೌಕಿಗೆ ‘ಲ್ಯಾಂಬೊರ್ಗಿನಿ’ ಕಾರು ಡಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಚೌಕಿಯ ಸುತ್ತಲಿನ ಅರ್ಧ ಗೋಡೆ ಕಿತ್ತುಹೋಗಿತ್ತು. ಭಾನುವಾರ ಸಂಜೆ 5.25ಕ್ಕೆ ಈ ಅವಘಡ ಸಂಭವಿಸಿದೆ. ಚಾಲಕ ಅತೀ ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಕಾರು ಓಡಿಸಿರುವುದು ಅವಘಡಕ್ಕೆ ಕಾರಣ ಎಂದು ಸಂಚಾರ ಪೊಲೀಸರು ಹೇಳಿದ್ದರು.

ಈ ಪ್ರಕರಣ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಅಲ್ಲದೆ ಅಪಘಾತದ ಬಳಿಕ ಐಶಾರಾಮಿ ಕಾರು ಚಾಲಕ ಜಖಂಗೊಂಡಿದ್ದ ಪೊಲೀಸ್ ಚೌಕಿ ಮುಂದೆ ನಿಂತು ಕಾರು ಚಾಲಕ ಕ್ಯಾಮೆರಾಗೆ ಪೋಸ್ ನೀಡಿದ್ದ. ಈ ಫೋಟೋ ಕೂಡ ಸಾಕಷ್ಟು ವೈರಲ್ ಆಗಿತ್ತು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಇದೀಗ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. 

ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸರು, ‘ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಿರುವ ಚೌಕಿಯಲ್ಲಿ ಕುಳಿತು ಸಿಬ್ಬಂದಿ ನಿತ್ಯವೂ ಕೆಲಸ ಮಾಡುತ್ತಾರೆ. ಅದೃಷ್ಟವಶಾತ್ ಘಟನೆ ನಡೆದಾಗ ಸಿಬ್ಬಂದಿ ಹೊರಗಡೆ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗೋಡೆಯ ಇಟ್ಟಿಗೆಗಳು ಚೌಕಿಯ ಒಳಗೆಯೇ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕುರ್ಚಿಗಳೂ ಮುರಿದಿವೆ. ಕಾರಿನ ಮುಂಭಾಗವೂ ಜಖಂಗೊಂಡಿದೆ. ಹೊಸ ಕಾರು ಇದಾಗಿದ್ದು, ನೋಂದಣಿ ಫಲಕವೂ ಇಲ್ಲ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ನಿರ್ಲಕ್ಷ್ಯದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಅಲ್ಲದೆ ಅಪಘಾತ ಪ್ರದೇಶದ ಸುತ್ತಮುತ್ತಲ ಕಟ್ಟಡಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತದೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಘಟನಾ ಪ್ರದೇಶದಲ್ಲಿ ಯಾವುದೇ ಸಂಚಾರಿ ಪೊಲೀಸರಿರಲಿಲ್ಲ ಎನ್ನಲಾಗಿದೆ. ಪ್ರಕರಣದ ವಿಚಾರಣೆಗಾಗಿಯೇ ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಲಾಗಿದೆ.

SCROLL FOR NEXT