ರಾಜ್ಯ

ಸಿಎಎ ವಿರುದ್ಧ ಪ್ರತಿಭಟನೆ ವೇಳೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು ಅಕ್ರಮ: ಹೈಕೋರ್ಟ್ ತರಾಟೆ 

Sumana Upadhyaya

ಬೆಂಗಳೂರು:ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಗರದಲ್ಲಿ ಕಳೆದ ಡಿಸೆಂಬರ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಬೆಂಗಳೂರು ಪೊಲೀಸ್ ಆಯುಕ್ತರು ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದು ಕಾನೂನು ಪ್ರಕಾರ ಸರಿಯಾದ ಕ್ರಮವಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.


ಬೆಂಗಳೂರು ಪೊಲೀಸ್ ಆಯುಕ್ತರು ಸರಿಯಾಗಿ ಯೋಚಿಸದೆ ಮತ್ತು ಕಾನೂನನ್ನು ಸರಿಯಾಗಿ ಪಾಲಿಸದೆ ನಿಷೇಧಾಜ್ಞೆ ಹೊರಡಿಸಿದ್ದರು ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರ ವಾದವನ್ನು ಎತ್ತಿಹಿಡಿದ ಕೋರ್ಟ್ ಬೆಂಗಳೂರು ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ನಿಷೇಧಾಜ್ಞೆ ಹೊರಡಿಸುವ ಮೊದಲು ಸರಿಯಾಗಿ ಬುದ್ದಿ ಉಪಯೋಗಿಸಿರಲಿಲ್ಲ ಎಂದು ವಿಭಾಗೀಯ ಪೀಠ ಹೇಳಿದೆ.
ಉಪ ಪೊಲೀಸ್ ಆಯುಕ್ತರು(ಡಿಸಿಪಿ) ತಮಗೆ ಸಲ್ಲಿಸಿದ ಪತ್ರದಲ್ಲಿನ ವಿಷಯಗಳನ್ನು ಯಥಾವತ್ತಾಗಿ ಸಲ್ಲಿಕೆ ಮಾಡಿ ನಗರದಲ್ಲಿ ನಿಷೇಧಾಜ್ಞೆ ಹೇರಿದ್ದರೇ ಹೊರತು ತಮ್ಮ ಕಾರಣಗಳನ್ನು ನೀಡಿರಲಿಲ್ಲ ಎಂದು ನ್ಯಾಯಾಲಯ ಪೊಲೀಸ್ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡಿದೆ.


ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುವಾಗ ಪ್ರತಿಭಟನಾಕಾರರು ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ನಾಶಪಡಿಸಬಹುದು, ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸಬಹುದು ಎಂಬ ಗ್ರಹಿಕೆಯಿಂದ ಡಿಸಿಪಿ ಸಲ್ಲಿಸಿದ್ದ ವರದಿಯನ್ನು ಆಧರಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಮಾತಿನಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಡಿಸಿಪಿ ಸಲ್ಲಿಸಿದ್ದ ವರದಿಯನ್ನು ಪರಿಶೀಲನೆ ಮಾಡಿ ನಂತರ ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಹೊರಡಿಸಬೇಕಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ಕೂಡ ಈ ಹಿಂದೆ ರಾಮ್ ಲೀಲಾ ಮೈದಾನ ಮತ್ತು ಅನುರಾಧ ಬಸಿನ್ ಕೇಸಿನ ಆದೇಶದಲ್ಲಿ ಹೇಳಿತ್ತು. ಮುಂಜಾಗ್ರತೆ ಕ್ರಮ ಬಿಟ್ಟರೆ ನಿಷೇಧಾಜ್ಞೆ ಏಕೆ ಜಾರಿಗೆ ತಂದಿದ್ದರು ಎಂದು ಪೊಲೀಸ್ ಆಯುಕ್ತರು ತಿಳಿಸಲಿಲ್ಲ ಎಂದು ಕೋರ್ಟ್ ಅರ್ಜಿದಾರ ಪ್ರೊ ರವಿರಾಮ್ ಕುಮಾರ್ ಅವರ ಅರ್ಜಿಯಲ್ಲಿನ ಅಂಶಗಳನ್ನು ಎತ್ತಿಹಿಡಿದು ಹೇಳಿತು. 

SCROLL FOR NEXT