ರಾಜ್ಯ

ವಸತಿ ನಿಲಯಕ್ಕೆ ಡಿಸಿಎಂ ಕಾರಜೋಳ ದಿಢೀರ್ ಭೇಟಿ, ಕಳಪೆ ಗುಟಮಟ್ಟದ ಊಟ ನೀಡಿದ ವಾರ್ಡನ್ ಗೆ ತರಾಟೆ

Manjula VN

ಬೆಂಗಳೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ‌ ಉಮಲೂಟಿ ವಸತಿ ನಿಲಯಕ್ಕೆ‌ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ನಿನ್ನೆ ತಡ ರಾತ್ರಿ ಭೇಟಿ ನಿಡಿ, ವಿದ್ಯಾರ್ಥಿ ನಿಲಯದಲ್ಲಿ ಕಳಪೆ ಗುಣಮಟ್ಟದಲ್ಲಿ ತಯಾರಾಗಿದ್ದ ಊಟ ರುಚಿ ಮಾಡಿ, ವಾರ್ಡನ್ ಗೆ ತರಾಟೆಗೆ ತೆಗೆದುಕೊಂಡರು.

ಪರಿಶಿಷ್ಟ ಜಾತಿ‌ ಮತ್ತು ಪಂಗಡದ ವಿದ್ಯಾರ್ಥಿ ನಿಲಯಗಳ ಉತ್ತಮ. ನಿರ್ವಹಣೆಗೆ ಸರ್ಕಾರ ಇಷ್ಟೊಂದು ಅನುದಾನ ನೀಡಿದರೂ ಕಳಪೆ ಗುಣಮಟ್ಟದ ಊಟ ನೀಡಿ, ಸ್ಚಚ್ಛತೆಯನ್ನು ಕಾಪಾಡದೇ ವಿದ್ಯಾರ್ಥಿಗಳಿಗೆ ರೋಗ ರುಜನಗಳು ಬರುವಂತೆ ಮಾಡುತ್ತೀರಿ. ಊಟ ರುಚಿಯಾಗಿಯೂ ಮಾಡದೇ ಪೂರ್ಣವಾಗಿ ಬೇಯಿಸದ ಊಟ ಹಾಕುವುದು ಕಂಡು ಬಂದಿದೆ. ಪ್ರತಿ ದಿನ ಇಂತಹುದೇ ಊಟ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು‌ ತಿಳಿಸಿದ‌ ಕೂಡಲೇ ಕೂಲಂಕಶವಾಗಿ ಸಚಿವರು ವಿಚಾರಿಸಿದರು.

ಅಡುಗೆ ತಯಾರಕರು ಸರಿಯಾಗಿ ಬಾರದಿರುವುದು ಕಂಡು ಬಂದಿದ್ದು, ಅಡುಗೆ ತಯಾರಕರು ಹಾಗೂ ಸಹಾಯಕರು ಉಚಿತವಾಗಿ ಕೆಲಸ‌ ಮಾಡುತ್ತಿಲ್ಲ. ಅಂತಹ ಬೇಜವಾಬ್ದಾರಿ ಹೊಂದಿರುವವರ ಸೇವೆಯನ್ನು ಮುಂದುವರೆಸಬಾರದು ಎಂದು ಸೂಚಿಸಿದರು.

ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕುಮಾರ ನಾಯಕ್ ಅವರಿಗೆ ದೂರವಾಣಿ ಕರೆ ಮಾಡಿದ ಡಿಸಿಎಂ, ವಿದ್ಯಾರ್ಥಿ ನಿಲಯದ ಅವ್ಯವಸ್ಥೆಗೆ ಕಾರಣರಾಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಒಟ್ಟು 4ಲಕ್ಷ ವಿದ್ಯಾರ್ಥಿಗಳು ವಸತಿ ನಿಲಯ ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ‌. ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆ, ತಾಲೂಕು, ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ಊಟ ಮಾಡಿ ಊಟ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಬೇಕು. ಯಾವುದೇ ವಿದ್ಯಾರ್ಥಿಗೂ ಕಳಪೆ ಗುಣಮಟ್ಟದ ಊಟ ಹಾಗೂ ಕಳಪೆ ಗುಣಮಟ್ಟದ ಸೌಲಭ್ಯ ನೀಡಬಾರದು. ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಊಟೋಪಚಾರ ನೀಡುವುದರ ಜೊತೆಗೆ ಉತ್ತಮ ಪರೀಕ್ಷಾ ಫಲಿತಾಂಶ ಬರುವಂತೆ ಪಾಠ ಪ್ರವಚನ ನಡೆಸಬೇಕು. ವಿಶೇಷ ತರಗತಿಗಳನ್ನು ನಡೆಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ವಿದ್ಯಾರ್ಥಿ ನಿಲಯಗಳಲ್ಲಿ ವಾರ್ಡನ್ ಹಾಗೂ ಶಿಕ್ಷಕರ ಪಾತ್ರ ಮಹತ್ತರವಾದುದು. ಜವಾಬ್ದಾರಿಯನ್ನರಿತು ಕಾರ್ಯನಿರ್ವಹಿಸಬೇಕು. ಬೇಜಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

SCROLL FOR NEXT