ರಾಜ್ಯ

ಜನವರಿ 5ರಂದು 17ನೇ ಚಿತ್ರಸಂತೆ: 4 ಲಕ್ಷ ಕಲಾಪ್ರೇಮಿಗಳ ಭೇಟಿ ನಿರೀಕ್ಷೆ

Raghavendra Adiga

ಬೆಂಗಳೂರು: ಯುವ ಕಲಾವಿದರಿಗೆ ತಮ್ಮ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿನ ಕುಮಾರಕೃಪಾ ರಸ್ತೆಯ ಚಿತ್ರಕಲಾ ಪರಿಷತ್‌ನ ಆವರಣದಲ್ಲಿ ಇದೇ ಜನವರಿ 5ರಂದು 17ನೇ ಚಿತ್ರ ಸಂತೆ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಚಿತ್ರಕಲಾ  ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,  ಚಿತ್ರಸಂತೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಖ್ಯಾತ ಕಲಾವಿದರು ರಚಿಸಿರುವ ಪ್ರಕೃತಿಯ ಚಿತ್ರಣದ  ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು, ಸಂತೆಯ ಪ್ರವೇಶ ದ್ವಾರದಲ್ಲಿ ಎತ್ತಿನ ಗಾಡಿಯ  ಪ್ರತಿರೂಪ ಹಾಗೂ ನೇಗಿಲ ಪ್ರತಿಕೃತಿಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ವಿವಿಧ ಭಾಗದ  ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಉತ್ತಮ  ವೇದಿಕೆಯಾಗಲಿದೆ. ಕಲೆಯ ಬೆಳವಣಿಗೆ ಕುರಿತಂತೆ ಚರ್ಚೆ ಸಂವಾದ,  ಕಲಾರಸಿಕರೊಡನೆ ಮಾತುಕತೆ ಹಾಗೂ ವಿಚಾರ ವಿನಿಮಯಗಳು ನಡೆಯಲಿವೆ.  ಚಿತ್ರಸಂತೆಯಲ್ಲಿ ಮೈಸೂರು ಸಂಪ್ರದಾಯಕ ಶೈಲಿ ರಾಜಸ್ತಾನಿ,  ಮಧುಬನಿ, ತೈಲ ಮತ್ತು ಜಲವರ್ಣಗಳ ಕಲಾಕೃತಿಗಳಲ್ಲದೆ ಅಕ್ರಿಲಿಕ್, ಕೋಲಾಜ್, ಲಿಟೋಗ್ರಾಫ್  ಮತ್ತಿತರ ಪ್ರಕಾರಗಳ ಕಲಾಕೃತಿಗಳು, ವ್ಯಂಗ್ಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು  ಹೇಳಿದರು.

ಚಿತ್ರಸಂತೆಯೂ ಶಿವಾನಂದ ವೃತ್ತದಿಂದ ವಿನ್ಸರ್  ಮ್ಯಾನರ್ ಹಾಗೂ ಕ್ರೆಸೆಂಟ್ ರಸ್ತೆಯ ಸ್ವಲ್ಪ ಭಾಗದಲ್ಲಿ ಕಲಾಕೃತಿಗಳನ್ನು  ಪ್ರದರ್ಶಿಸಲಾಗುವುದು. ದೇಶದ ವಿವಿಧ ಭಾಗಗಳಿಂದ 1500 ಕಲಾವಿದರ ಕಲಾಕೃತಿಗಳು  ಪ್ರದರ್ಶನಗೊಳ್ಳುತ್ತಿರುವುದು ವಿಶೇಷ. ಪ್ರದರ್ಶನದಲ್ಲಿ ಮಾರಾಟವಾಗುವ ಯಾವುದೇ  ಕಲಾಕೃತಿಗಳಿಂದ ಕಮಿಷನ್ ಪಡೆಯುತ್ತಿಲ್ಲ. 100 ರೂಪಾಯಿಗಳಿಂದ ಲಕ್ಷಾಂತರ ರೂಪಾಯಿಗಳವರೆಗೆ  ಕಲಾಕೃತಿಗಳು ಸಿಗಲಿವೆ ಎಂದು ಅವರು ತಿಳಿಸಿದರು. 

ಹಿರಿಯ ಕಲಾವಿದರು ಮತ್ತು ವಿಶೇಷ  ಚೇತನ ನಡಿಗೆ ಪರಿಷತ್ತು ಆವರಣದಲ್ಲಿ ಮಳಿಗೆಗಳ ಅವಕಾಶವನ್ನು ಕಲ್ಪಿಸಲಾಗಿದೆ. ಸ್ಟೇಟ್  ಬ್ಯಾಂಕ್ ಆಫ್ ಇಂಡಿಯಾ ಎರಡು ಎಟಿಎಂ ಮತ್ತು ಕೆನರಾ ಬ್ಯಾಂಕ್‌ನ ಸಂಚಾರಿ ಎಟಿಎಂ ಸೇವೆ  ಸಲ್ಲಿಸಲಿದೆ. ಈ ಬಾರಿಯ ಚಿತ್ರದೊಂದಿಗೆ 4 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆಯಿದೆ.  ಕಳೆದ ವರ್ಷ ಅಂದಾಜು 3 ಕೋಟಿ ಗೂ ಹೆಚ್ಚು ಮೊತ್ತದ ಕಲಾಕೃತಿಗಳು ಮಾರಾಟವಾಗಿದ್ದವು. ಈ  ವರ್ಷ ಇನ್ನು ಹೆಚ್ಚು ಮಾರಾಟವಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಪ್ರೊ.  ಎಂ.ಎಸ್. ನಂಜುಂಡರಾವ್ ಪ್ರಶಸ್ತಿಗೆ ಚೆನ್ನೈನ ಹಿರಿಯ ಕಲಾವಿದ ಆರ್.ಬಿ. ಭಾಸ್ಕರನ್, ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿ ಭಾರತೀಯ ವಿದ್ಯಾಭವನದ ನಿರ್ದೇಶಕ ಹಾಗೂ ಕಲಾವಿದ ಎಚ್.ಎನ್. ಸುರೇಶ್, ಎಂ.ಆರ್ಯಮೂರ್ತಿ ಪ್ರಶಸ್ತಿಗೆ ಚಿತ್ರಕಲಾವಿದ ಎಂ. ಕೃಷ್ಣಪ್ಪ, ಡಿ.  ದೇವರಾಜ ಅರಸು, ಪ್ರಶಸ್ತಿಗೆ ಹಿರಿಯ ಕಲಾವಿದ ಗಣೇಶ್ ಸೋಮಾಯಾಜಿ, ವೈ. ಸುಬ್ರಮಣ್ಯ  ರಾಜು, ಪ್ರಶಸ್ತಿಗೆ ವಿಜಯ ಅಗರ ಗುಂಡಗಿ ಅವರು ಆಯ್ಕೆಯಾಗಿದ್ದು ಅವರೆಲ್ಲರಿಗೂ  ಸದ್ಯದಲ್ಲಿಯೇ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಂಕರ್ ಮಾಹಿತಿ ನೀಡಿದರು.

SCROLL FOR NEXT