ರಾಜ್ಯ

ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ವಾದ ಮಂಡನೆ, ತೀರ್ಪು ಪ್ರಕಟಗೊಳ್ಳಲಿ: ಯಡಿಯೂರಪ್ಪ

Nagaraja AB

ಬೆಂಗಳೂರು: ಕನ್ನಡದಲ್ಲೇ ನ್ಯಾಯಾಲಯದ ತೀರ್ಪು ಹೊರಬಿದ್ದಾಗ ಕಕ್ಷಿದಾರರಿಗೂ ತಮ್ಮ ಪ್ರಕರಣದ ವಾಸ್ತವ ಸ್ಥಿತಿ ತಿಳಿಯಲು ಸಾಧ್ಯವಾಗುತ್ತದೆ. ಆದ್ದರಿಂದ ನ್ಯಾಯಾಂಗದ ಎಲ್ಲಾ ವಲಯಗಳಲ್ಲೂ ಕನ್ನಡವೇ ಅಧಿಕೃತ ಭಾಷೆಯಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

ನಗರದ  ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶನಿವಾರ ಆಯೋಜಿಸಿದ್ದ  ಕನ್ನಡದಲ್ಲೇ ತೀರ್ಪು ನೀಡಿದ ನ್ಯಾಯಾಧೀಶರು, ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು ಹಾಗೂ  ವಕೀಲರಿಗೆ 2017-18 ಮತ್ತು 2018-19ನೇ ಸಾಲಿನ ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿಯನ್ನು  ಪ್ರದಾನ ಮಾಡಿ, ಅವರು ಮಾತನಾಡಿದರು.

ನ್ಯಾಯಾಲಯಗಳ ನ್ಯಾಯಾಧೀಶರು ಕೂಡಾ ಕನ್ನಡ ಭಾಷೆಯನ್ನು ಕಲಿತುಕೊಳ್ಳಬೇಕು. ಆಗ ಸುಲಭವಾಗಿ ಕನ್ನಡದಲ್ಲೇ ತೀರ್ಪು ನೀಡಲು ಸಾಧ್ಯವಾಗಲಿದೆ. ರಾಜ್ಯದ ಅಧೀನ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ವಾದ ಮಂಡನೆ ಮತ್ತು  ತೀರ್ಪು ನೀಡುವಂತೆ ಹೈಕೋರ್ಟ್‌ನಲ್ಲಿ ಕೂಡ ಸಮಗ್ರವಾಗಿ ಕನ್ನಡ ಭಾಷೆಯನ್ನು  ಬಳಸಬೇಕು ಎಂದು ಹೇಳಿದರು.

ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಸಾಧಿಸಲು ಹಾಗೂ ಸ್ಥಳೀಯರಿಗೆ ಉದ್ಯೋಗ, ಗಡಿಭಾಗದಲ್ಲಿ  ಕನ್ನಡಿಗರನ್ನು ರಕ್ಷಣೆ ಮಾಡುವುದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. 

ಕಾನೂನು  ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ,  ರಾಜ್ಯದ  ಗ್ರಾಮೀಣ ಪ್ರದೇಶದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಬಲ್ಲ ಮ್ಯಾನೇಜರ್  ಮತ್ತು ಸಿಬ್ಬಂದಿಗಳು ಇರಬೇಕು. ರೈತರಿಗೆ ಇಂಗ್ಲಿಷ್ ಬರುವುದಿಲ್ಲ. ಬ್ಯಾಂಕ್  ಅಧಿಕಾರಿಗಳಿಗೆ ಕನ್ನಡ ಬರುವುದಿಲ್ಲ. ಈ ಗೊಂದಲದಿಂದಾಗಿ ರೈತರು ಬ್ಯಾಂಕ್ ಅಧಿಕಾರಿಗಳು  ಎಲ್ಲಿ ಸಹಿ ಮಾಡಬೇಕು ಎಂದು ಹೇಳೋತ್ತಾರೆ ಅಲ್ಲಿಗೆ ಸಹಿ ಮಾಡಿ ಬಿಡುತ್ತಾರೆ. ಇದು  ರೈತರಿಗೆ ಹೆಚ್ಚು ಅಪಾಯಕಾರಿ. ಮುಖ್ಯಮಂತ್ರಿಯವರು ಇದನ್ನು ಗಂಭೀರವಾಗಿ  ಪರಿಗಣಿಸಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಮಾತನಾಡಿ,   ನ್ಯಾಯಾಂಗ  ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ತೀರ್ಪು ಹೊರ ಬರುವಂತೆ ವೈದ್ಯಕೀಯ ಕ್ಷೇತ್ರದಲ್ಲೂ  ವೈದ್ಯರು ತಮ್ಮ ರೋಗಿಗಳಿಗೆ ಕನ್ನಡದಲ್ಲೇ ಔಷಧಿ ಚೀಟಿಗಳನ್ನು ಬರೆದು ಕೊಂಡುವ ಪದ್ಧತಿ  ಬೆಳೆದು ಬರಬೇಕು ಎಂದು ಹೇಳಿದರು.

ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ.ಎನ್.ಪಣೀಂದ್ರ  ಮಾತನಾಡಿ,  ಕನ್ನಡದಲ್ಲೇ  ತೀರ್ಪು ನೀಡುವಾಗ ಕಕ್ಷಿದಾರರನಿಗೂ ಏನು ತೀರ್ಪು ಹೊರಬಿದ್ದಿದೆ ಎಂಬುದನ್ನು  ಅರಿವಾಗುತ್ತದೆ ಎಂದರು.

ಕನ್ನಡ  ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ್ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT