ಬಾಗಲಕೋಟೆ: ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಭಾಗದ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ಜಿಲ್ಲೆಯ ಹುನಗುಂದ ತಾಲೂಕು ತಾರಿವಾಳ ಗ್ರಾಮದ ಪೂರ್ಣಿಮಾ ರೇವಣಸಿದ್ದಪ್ಪ ನಾಶಿ ಎನ್ನುವ ಬಾಲಕಿ ಸಾಬೀತು ಪಡಿಸಿದ್ದಾಳೆ.
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ ೨೦ ರಂದು ನಡೆಸಲು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿರುವ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಗೊಂಡಿದ್ದಾಳೆ.
ತಾರಿಹಾಳ ಗ್ರಾಮದ ಬಾಲಕಿ ಪೂರ್ಣಿಮಾ ಪಕ್ಕದ ಜಂಬದಿನ್ನಿ ಗ್ರಾಮದ ಸರ್ಕಾರ ಪ್ರೌಢಶಾಲೆಯಲ್ಲಿ ೯ ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಜ.೨೦ ರಂದು ದೆಹಲಿಯಲ್ಲಿ ನಡೆಯಲಿರುವ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಜ. ೧೬ ರಂದು ಬೆಂಗಳೂರಿನಲ್ಲಿ ವರದಿ ಮಾಡಿಕೊಳ್ಳಲಿದ್ದಾರೆ. ಈ ಕುರಿತು ಅವರಿಗೊಂದು ಇ-ಮೇಲ್ ಸಂದೇಶ ಬಂದಿದೆ. ಕರ್ನಾಟಕ ಸಮಗ್ರ ಶಿಕ್ಷಣ ಕಾರ್ಯಕ್ರಮ ಅಧಿಕಾರಿ ರವಿಕುಮಾರ ವಿ.ಆರ್. ಮೇಲ್ ಮಾಡಿದ್ದಾರೆ.
ಆನ್ ಲೈನ್‌ನಲ್ಲಿ ಪ್ರಧಾನಿ ಮೋದಿ ಅವರು ಜ. ೨೦ ರಂದು ಪರೀಕ್ಷಾ ಪೆ ಚರ್ಚಾ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ ಎನ್ನುವುದನ್ನು ಗಮನಿಸಿದ ಪೂರ್ಣಿಮಾ, ಅದರಲ್ಲಿ ಮಾಹಿತಿ ತಿಳಿದು ಡಿಸೆಂಬರ್ ೨೩ ರಂದು ಎಕ್ಸಾಮಿಂಗ್ ಎಕ್ಸಾಂ ವಿಷಯದ ಮೇಲೆ ಇಂಗ್ಲೀಷ್‌ನಲ್ಲಿ ಪ್ರಬಂಧ ಬರೆದ ವೆಬ್‌ಗೆ ಅಪ್‌ಲೋಡ್ ಮಾಡಿದ್ದಳು. ಆ ಪ್ರಬಂಧಕ್ಕೆ ಪ್ರಮಾಣಪತ್ರವೊಂದು ಬಂದಿತ್ತು. ಇದೀಗ ಪ್ರಧಾನಿ ಮೇದಿ ಅವರ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಗೊಂಡಿದ್ದಾಳೆ. ಪೂರ್ಣಿಮಾ ಆಯ್ಕೆಗೊಂಡಿರುವುದು ಅವರ ಕುಟುಂಬ ಸೇರಿದಂತೆ ಜಿಲ್ಲಾದ್ಯಂತ ಹರ್ಷದ ವಾತಾವರಣ ಸೃಷ್ಟಿಸಿದೆ.
ಪ್ರಧಾನ ಮಂತ್ರಿಯವರ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಸುಮಾರು 42 ಹೈಸ್ಕೂಲ್ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಅವರಲ್ಲಿ ಜವಾಹರ್ ನವೋದಯ ವಿದ್ಯಾಲಯ, ಕೇಂದ್ರೀಯ ವಿದ್ಯಾಲಯ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಸೇರಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಹುನ್ಶ್ಯಾಲ್ ನ 16 ವರ್ಷದ 10ನೇ ತರಗತಿ ವಿದ್ಯಾರ್ಥಿನಿ ಶ್ವೇತಾ ಜಾಲಾಪುರ್ ಕೂಡ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾಳೆ. ಈಕೆ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ.
ಪ್ರಧಾನಿಯವರ ಕಾರ್ಯಕ್ರಮಕ್ಕೆ ಆಯ್ಕೆಯಾದ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾತನಾಡಿದ ಶ್ವೇತಾ ಜಾಲಾಪುರ್, ಅಸ್ಪೃಶ್ಯತೆ ಬಗ್ಗೆ ನಾನೊಂದು ಪ್ರಬಂಧ ಬರೆದಿದ್ದೆ. ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಶಿಕ್ಷಣ ಹೇಗೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿವರಿಸಿದ್ದೆ. ನನ್ನ ಬರಹ ನೋಡಿ ಆಯ್ಕೆ ಮಾಡಿಕೊಂಡಿರಬೇಕು ಎನ್ನುತ್ತಾಳೆ.