ಬಿ.ಎಸ್.ಯಡಿಯುರಪ್ಪ 
ರಾಜ್ಯ

ನೂರಕ್ಕೆ ನೂರರಷ್ಟು ತೆರಿಗೆ ಸಂಗ್ರಹ ಗುರಿ ಮುಟ್ಟಲಿದ್ದೇವೆ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಇಲಾಖೆಗಳಿಂದ ಒಟ್ಟು 1,17,044 ಕೋಟಿ ರೂ‌.ತೆರಿಗೆ ಸಂಗ್ರಹದ ಗುರಿ ಹೊಂದಿದ್ದು,ನೂರಕ್ಕೆ ನೂರರಷ್ಟು ಗುರಿ ಮುಟ್ಟಲಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. 

ಬೆಂಗಳೂರು" ಇಲಾಖೆಗಳಿಂದ ಒಟ್ಟು 1,17,044 ಕೋಟಿ ರೂ‌.ತೆರಿಗೆ ಸಂಗ್ರಹದ ಗುರಿ ಹೊಂದಿದ್ದು,ನೂರಕ್ಕೆ ನೂರರಷ್ಟು ಗುರಿ ಮುಟ್ಟಲಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ತೆರಿಗೆ ಸಂಗ್ರಹಣೆ ಸಂಬಂಧ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ, ನೋಂದಣಿ ಮತ್ತು ಮುದ್ರಾಂಕ, ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು.ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,2019-20ನೇ ಅವಧಿಯಲ್ಲಿ 1,17,044 ಕೋಟಿ ರೂ.ಗುರಿ ಹೊಂದಿದ್ದೇವೆ.ಬೇರೆ ಇಲಾಖೆಗ ಳಿಂದ ಹೆಚ್ಚು ತೆರಿಗೆ ಸಂಗ್ರಹ‌‌ ಮಾಡಿ,ಎಲ್ಲಿ ಕೊರತೆ ಬೀಳುತ್ತದೆ ಆ ಇಲಾಖೆಗ ಳಿಗೆ ಅದನ್ನು ಸರಿದೂಗಿಸಲಿದ್ದೇವೆ.ಆ ಮೂಲಕ ಈ‌ ವರ್ಷದ ಗುರಿಯನ್ನು ಮುಟ್ಟಲೇಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ನೂರಕ್ಕೆ ನೂರರಷ್ಟು ಗುರಿ ಮುಟ್ಟಲು ಎಲ್ಲ ಅಗತ್ಯ ಪ್ರಯತ್ನಗಳನ್ನು ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆಗೆ 76,046 ಕೋಟಿ ರೂ.ತೆರಿಗೆ ಸಂಗ್ರಹ ಗುರಿ ನೀಡಲಾಗಿದ್ದು ಡಿಸೆಂಬರ್ 2019 ರ ಅಂತ್ಯದವರೆಗೆ 55,984 ಕೋಟಿ ರೂ.ತೆರಿಗೆ ಸಂಗ್ರಹವಾಗಿದೆ.ಅಂದರೆ ಶೇ.73.6 ರಷ್ಟು ಪ್ರಗತಿ ಸಾಧಿಸಲಾಗಿ ದೆ.ಇನ್ನು ಜಿಎಸ್‍ಟಿ ಸಂಗ್ರಹದಲ್ಲಿ ಇಲ್ಲಿಯವರೆಗೆ ರಾಜ್ಯದ ಸಾಧನೆ 61,245 ಕೋಟಿ ರೂ.ಇದ್ದು, ರಾಷ್ಟ್ರದಲ್ಲೆ ರಾಜ್ಯ ಎರಡನೇ ಸ್ಥಾನದಲ್ಲಿದ್ದೇವೆ. ರಾಜ್ಯದ ಜಿಎಸ್‍ಟಿ ಬೆಳವಣಿಗೆ ಶೇ.14.2 ರಷ್ಟು ಇದೆ ಎಂದು ಅವರು ಹೇಳಿದರು.

ತಡವಾಗಿ ಜಿಎಸ್‍ಟಿ ತುಂಬುವವರು ರಿಟರ್ನ್ಸ್ ಫಯಲ್ ಮಾಡುವ ಮತ್ತು ರಿಟನ್ರ್ಸ್ ಫೈಲ್ ಮಾಡದೇ ಇರುವವರ ವ್ಯಾಪಾರ ಸ್ಥಳಗಳಿಗೇ ಭೇಟಿ ನೀಡಿ ತೆರಿಗೆ ವಸೂಲಾತಿ ಬಗ್ಗೆ ಪರಿಶೀಲನೆ ನಡೆಸಿ 551.44 ಕೋಟಿ ಸಂಗ್ರಹಿಸಲಾ ಗಿದೆ.2020ರ ಏಪ್ರಿಲ್ 1ರಿಂದ ಹೊಸ ಜಿಎಸ್‍ಟಿ ರಿಟರ್ನ್ಸ್ ನಮೂನೆ ಜಾರಿಗೆ ಬರಲಿದೆ.ಹೊಸ ನಮೂನೆಯನ್ನು ತೆರಿಗೆದಾರರಲ್ಲಿ ಜನಪ್ರಿಯಗೊಳಿ ಸಲು ಕ್ರಮ ವಹಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಅಬಕಾರಿ ಇಲಾಖೆಗೆ 20,950 ಕೋಟಿ ರೂ.ರಾಜಸ್ವ ಸಂಗ್ರಹದ ವಾರ್ಷಿಕ ಗುರಿ ನಿಗದಿಯಾಗಿದೆ.ಈ ವರೆಗೆ 16,187.95 ಕೋಟಿ ರೂ.ರಾಜಸ್ವ ಸಂಗ್ರಹ ಆಗಿದ್ದು, ಶೇ.77.23 ರಷ್ಟು ಗುರಿ ಸಾಧನೆ ಮಾಡಲಾಗಿದೆ.ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 1165.33 ಕೋಟಿ ರೂ.ಹೆಚ್ಚುವರಿ ತೆರಿಗೆ ಸಂಗ್ರಹವಾಗಿದ್ದು, ಬೆಳವಣಿಗೆ ದರ ಶೇ. 7.76 ರಷ್ಟಿದೆ ಎಂದು ಮುಖ್ಯಮಂತ್ರಿ ಅವರು ಸ್ಪಷ್ಟಪಡಿಸಿದರು.

ಸಾರಿಗೆ ಇಲಾಖೆಯಲ್ಲಿ ಒಟ್ಟು 7100 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಹೊಂದಿದ್ದೇವೆ.ಸಾರಿಗೆ ಇಲಾಖೆಯಿಂದ 6601.96 ಕೋಟಿ ರೂ ಹಾಗೂ ಸಾರಿಗೆ ಸಂಸ್ಥೆಗಳಿಂದ 498.04 ಕೋಟಿ ರೂ. ಆದಾಯದ ಗುರಿ ಹೊಂದಲಾಗಿದೆ. ಈವರೆಗೆ 4864.80 ಕೋಟಿ ರಾಜಸ್ವ ಸಂಗ್ರಹ ಆಗಿದ್ದು, ವಾಹನಗಳ ಮಾರಾಟ ಕುಸಿದಿರುವುದರಿಂದ ಸುಮಾರು 460.20 ಕೋಟಿ ಕೊರತೆ ಆಗಿದೆ.ಈ ಇಲಾಖೆಯಲ್ಲಿ ವರ್ಷಾಂತ್ಯಕ್ಕೆ ಸುಮಾರು 300 ಕೋಟಿ ಕೊರತೆಯಾಗುವ ಸಾಧ್ಯತೆ ಇದೆ ಎಂದರು.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 11,828 ಕೋಟಿ ರೂ.ರಾಜಸ್ವ ಸಂಗ್ರಹದ ವಾರ್ಷಿಕ ಗುರಿ ಹೊಂದಿದ್ದು, ಈ ವರೆಗೆ 8297.65 ಕೋಟಿ ರೂ. ಸಂಗ್ರಹ ಆಗಿದ್ದು, ಕಳೆದ ವರ್ಷಕ್ಕಿಂತ 410.75 ಕೋಟಿ ರೂ. ಹೆಚ್ಚಳವಾಗಿದೆ ಎಂದು ತಿಳಿಸಿದರು.

ಕೇಂದ್ರದಿಂದ ಬಾಕಿ ಹಣ ಬಿಡುಗಡೆ ವಿಚಾರವಾಗಿ ಮಾತನಾಡಿದ ಅವರು, 3-4 ದಿನಗಳಲ್ಲಿ ದೆಹಲಿಗೆ ತೆಳುತ್ತಿದ್ದು,ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ಹಣ ಬಿಡುಗಡೆಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಕೇಂದ್ರದಿಂದ ಜಿಎಸ್ ಟಿ ಪರಿಹಾರ ಬಾಕಿ ಹಣ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಬೊಮ್ಮಾಯಿ,ಈಗಾಗಲೇ 3500 ಕೋಟಿ ಬಾಕಿ ಹಣ ಬಿಡುಗಡೆ ಮಾಡಲಾಗಿದೆ.ಜಿಎಸ್ ಟಿ ಕೌನ್ಸಿಲ್ ನಲ್ಲಿ ಬಾಕಿ ಹಣ ಕೊಡಿ ಎಂದು ನಾವು ಮನವಿ ಮಾಡಿದ್ದೇವೆ. ಎರಡು ಕಂತಿನ ಹಣ ಬಾಕಿ ಪಾವತಿಸಬೇಕಿದೆ.ಜನವರಿ ಕೊನೆ ಮತ್ತು ಮಾರ್ಚ್ ಕೊನೆ ವಾರ ಎರಡು ಕಂತು ಹಣ ಬರುವ ವಿಶ್ವಾಸ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT