ರಾಜ್ಯ

ಜೆಎನ್'ಯು ಹಿಂಸಾಚಾರ: ಶುರುವಾಯ್ತು ರಾಜಕೀಯ ಕೆಸರೆರಚಾಟ, ಮೌನ ತಾಳಿದ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ

Manjula VN

ಬೆಂಗಳೂರು: ರಾಜಧಾನಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಘಟನೆಯ ಬಗ್ಗೆ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟ ಆರಂಭಗೊಂಡಿದ್ದು, ಪ್ರಕರಣ ಸಂಬಂಧ ಪ್ರದಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೌನ ತಾಳಿಸಿದ್ದಾರೆ. 

ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು, ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. 

ವಿದ್ಯಾರ್ಥಿಗಳ ಮೇಲೆ ಎಬಿವಿಪಿ ನಡೆಸಿರುವ ದಾಳಿಯನ್ನು ಖಂಡಿಸುತ್ತೇವೆ. ಕಲಿಕೆಯ ದೇವಾಲಯದಲ್ಲಿ ಅನಾಗರೀಕ ವರ್ತನೆಯಾಗಿದೆ. ಎಬಿವಿಪಿ ಮನಸ್ಥಿತಿ ಹಾಗೂ ಅದರ ಮುಖ್ಯಸ್ಥ ಮನಸ್ಥಿತಿಯನ್ನು ಇದು ತೋರಿಸುತ್ತದೆ. ರಾಜನಿದ್ದಂತೆಯೇ ಆತನ ಸಹಚರರು ಇರುತ್ತಾರೆಂಬಂತಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ವಿದ್ಯಾರ್ಥಿಗಳು ದೇಶದ ಭವಿಶ್ಯ. ದೇಶ ಹಾಗೂ ಇತಿಹಾಸ ಇಂತಹ ಆಡಳಿತವನ್ನು ಎಂದಿಗೂ ಕ್ಷಮಿಸುವುದಿಲ್ಲ. ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ಆಕ್ರಮಣ ಮಾಡಲಾಗುತ್ತಿದೆ. ಎಎಂಯು, ಜೆಎಂಐ ಮತ್ತು ಜೆಎನ್'ಯುವಿನಲ್ಲಿ ನಡೆದ ಹಿಂಸಾಚಾರ ಖಂಡನೀಯ ಎಂದು ಪರಮೇಶ್ವರ್ ಅವರು ಹೇಳಿದ್ದಾರೆ. 

ಇನ್ನು ಘಟನೆ ಸಂಬಂಧ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಬಿಜೆಪಿ ನಾಯಕ ಹಾಗೂ ಸಚಿವ ಸಿಟಿ ರವಿಯವರು, ಜೆಎನ್'ಯುನಲ್ಲಿ ಹಿಂಸಾಚಾರ ನಡೆಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಇಂತಹ ಗೂಂಡಾಗಳು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆಯಿದ್ದಂತೆ. ಹಿಂಸಾಚಾರದಲ್ಲಿ ತೊಡಗಿರುವುದು ಇದು ಮೊದಲೇನಲ್ಲ. ಇಂತಹ ಬೆಂಬಲಿಗರ ವಿರುದ್ಧ ದೆಹಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. 

ಹಿಂಸಾಚಾರ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿದ್ದು, ಜೆಡಿಎಸ್ ಮಾತ್ರ ಮೂಕ ಪ್ರೇಕ್ಷಕನಂತಿದೆ. ಪ್ರಕರಣ ಸಂಬಂಧ ಈವರೆಗೂ ಯಾವುದೇ ಜೆಡಿಎಸ್ ನಾಯಕರೂ ಯಾವುದೇ ಪ್ರತಿಕ್ರಿಯೆಗಳನ್ನೂ ನೀಡಿಲ್ಲ. 

SCROLL FOR NEXT