ರಾಜ್ಯ

ಉಡುಪಿಯಲ್ಲಿ ಹೃದಯ ವಿದ್ರಾವಕ ಘಟನೆ: ಮಕ್ಕಳ ಮಾರಾಟಕ್ಕೆ ಮುಂದಾಗಿದ್ದ ತಂದೆಯಿಂದ ರಕ್ಷಿಸಿದ ಅಧಿಕಾರಿಗಳು 

Sumana Upadhyaya

ಉಡುಪಿ: ಮಂಗಳೂರು ಮೂಲದ ದಂಪತಿಗೆ ತನ್ನಿಬ್ಬರು ಮಕ್ಕಳನ್ನು ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿಯಿಂದ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಕ್ಕಳನ್ನು ಕಾಪಾಡಿದ್ದಾರೆ.


ದಲಿತ ಸಮುದಾಯಕ್ಕೆ ಸೇರಿದ ಆನಂದ ತನ್ನಿಬ್ಬರು ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ ಎಂದು ಚಿಂತಿಸಿ ಮಾರಾಟ ಮಾಡಲು ಯತ್ನಿಸಿದ್ದರು. ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಬೈಲೂರು ಸಮೀಪ ನೀರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.


5 ವರ್ಷಗಳ ಹಿಂದೆ ಮದುವೆಯಾಗಿದ್ದ ಆನಂದ್ ಗೆ ಇಬ್ಬರು ಮಕ್ಕಳಾದ ನಂತರ ಆತನ ಪತ್ನಿ ಎರಡು ವರ್ಷಗಳ ಹಿಂದೆ ತೊರೆದು ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು.ಸರ್ಕಾರಿ ಜಮೀನಿನಲ್ಲಿ ಸಣ್ಣ ಗುಡಿಸಲು ಕಟ್ಟಿಕೊಂಡು ಆನಂದ್ ನಾಲ್ಕೂವರೆ ವರ್ಷದ ಮಗ, ಮೂರೂವರೆ ವರ್ಷದ ಮಗಳು ಮತ್ತು 75 ವರ್ಷದ ವಯೋವೃದ್ಧೆ ತಾಯಿಯನ್ನು ನೋಡಿಕೊಂಡು ಸಂಸಾರ ಸಾಗಿಸುತ್ತಿದ್ದರು. 


ಮಕ್ಕಳನ್ನು ಸಾಕಿಕೊಂಡು ಜೀವನ ನಿರ್ವಹಿಸಲು ಕಷ್ಟವಾಗುತ್ತದೆ ಎಂದು ಮಕ್ಕಳನ್ನು ಮಾರಾಟ ಮಾಡಲು ಮುಂದಾದರು. ಆತನ ಯೋಜನೆ ತಿಳಿದ ಗ್ರಾಮಸ್ಥರು ಅಧಿಕಾರಿಗಳಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ತನಿಖೆ ನಡೆಸಿದಾಗ ಅವರ ಮುಂದೆ ಆನಂದ್ ತನ್ನ ಅಸಹಾಯಕತೆಯನ್ನು ತೋಡಿಕೊಂಡರು. ಮಕ್ಕಳನ್ನು ನಂತರ ಅಧಿಕಾರಿಗಳು ಉಡುಪಿಯ ಸಂತೆಕಟ್ಟೆಯ ಕೃಷ್ಣಾನುಗ್ರಹ ಶಿಶು ಪಾಲನಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅಲ್ಲಿರಿಸಿದರು.


ಅಗತ್ಯಬಿದ್ದರೆ ಮಕ್ಕಳ ಶಿಕ್ಷಣ ಮುಗಿಯುವವರೆಗೆ ಯಾವುದಾದರೂ ಎನ್ ಜಿಒಗಳಲ್ಲಿ ಮಕ್ಕಳ ಊಟ, ವಸತಿ, ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕಾನೂನು ಅಧಿಕಾರಿ ಪ್ರಭಾಕರ್ ಆಚಾರ್ಯ ತಿಳಿಸಿದ್ದಾರೆ.

SCROLL FOR NEXT