ರಾಜ್ಯ

ಫ್ರೀ ಕಾಶ್ಮೀರ ಫಲಕ:  7 ಗಂಟೆಗಳ ಕಾಲ ವಿದ್ಯಾರ್ಥಿನಿ ನಳಿನಿ ವಿಚಾರಣೆ

Manjula VN

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿ ಆವರಣದಲ್ಲಿ ಇತ್ತೀಚೆಗೆ ನಡೆದಿದ್ದ ಪ್ರತಿಭಟನೆಯಲ್ಲಿ ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸಿ ವಿವಾದ ಸೃಷ್ಟಿಸಿದ್ದ ಹಳೇ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಶನಿವಾರ ಪೊಲೀಸರ ಎದುರು ಹಾಜರಾಗಿದ್ದು, ಸತತ 7 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದಾರೆ. 

ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಶುಕ್ರವಾರ ಮಧ್ಯಂತರ ಜಾಮೀನು ಪಡೆದಿದ್ದ ನಳಿನಿ, ಶನಿವಾರ ತಂದೆ ಬಾಲಕುಮಾರ್ ಅವರೊಂದಿಗೆ ಜಯಲಕ್ಷ್ಮೀಪುರಂ ಠಾಣೆಗೆ ಹಾಜರಾದರು. 

ಎನ್.ಆರ್. ಉಪವಿಭಾಗದ ಎಸಿಪಿ ಶಿವಶಂಕರ್, ಜಯಲಕ್ಷ್ಮೀಪುರಂ ಠಾಣೆಯ ಇನ್ಸ್ ಪೆಕ್ಟರ್ ಎಸ್.ಡಿ.ಸುರೇಶ್ ಕುಮಾರ್ ಮತ್ತು ಸಿಬ್ಬಂದಿ ನಳಿನಿ ವಿಚಾರಣೆ ನಡೆಸಿದರು. ಕಾನೂನು ಮತ್ತು ಸುವ್ಯವಸ್ಥೆ ಡಿಸಿಬಿ ಎಂ.ಮುತ್ತುರಾಜು ಕೂಡ ಠಾಣೆಗೆ ಆಗಮಿಸಿ ನಳಿನಿಯನ್ನು ಕೆಲಕಾಲ ವಿಚಾರಣೆ ನಡೆಸಿ ತೆರಳಿದರು. 

ಬೆಳಗ್ಗೆ 9.50ಕ್ಕೆ ಜಯಲಕ್ಷ್ಮೀಪುರಂ ಠಾಣೆಗೆ ಆಗಮಿಸಿದ ನಳಿನಿಯೊಂದಿಗೆ ಪೊಲೀಸರು ಬೆಳಗ್ಗೆ 10ರಿಂದ ವಿಚಾರಣೆ ಆರಂಭಿಸಿದರು. ಜ.8ರಂದು ಮಾನಸ ಗಂಗೋತ್ರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಿಸಿದ್ದೇಕೆ? ಜೆಎನ್'ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸಿದ್ದೇಕೆ? ಯಾವ ಉದ್ದೇಶದಿಂದ ಆ ಫಲಕ ಪ್ರದರ್ಶಿಸಲಾಗಿದೆ? ಆ ಪ್ರತಿಭಟನೆಗೆ ಆಹ್ವಾನಿಸಿದವರು ಯಾರು? ಹೀಗೆ ಹಲವಾರು ಪ್ರಶ್ನೆಗಳನ್ನು ನಳಿನಿಯವರಿಗೆ ಪೊಲೀಸರು ಕೇಳಿದ್ದಾರೆ. ಪೊಲೀಸರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ನಳಿನಿ ಉತ್ತರಿಸಿದ್ದಾರೆ. ಕೆಲವು ಪ್ರಶ್ನೆಗಳಿಗೆ ನಳಿನಿಯವರು ಮೌನ ತಾಳಿದ್ದರು ಎಂದು ಹೇಳಲಾಗುತ್ತಿದೆ. 

ಫ್ರೀ ಕಾಶ್ಮೀರ ನಾಮಫಲಕ ಹಿಡಿದಿದ್ದರ ಉದ್ದೇಶವನ್ನು ನಾನು ಈ ಹಿಂದೆಯೇ ಹೇಳಿದ್ದೇನೆ. ನಾಮಫಲಕ ಹಿಡಿದಿದ್ದರ ಹಿಂದೆ ಯಾವುದೇ ದುರುದ್ದೇಶಗಳೂ ಇರಲಿಲ್ಲ. ಕಾಶ್ಮೀರದಲ್ಲಿ ಕಳೆದ 5 ತಿಂಗಳುಗಳಿಂದ ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಲಾಗಿದ್ದು, ಅದರಿಂದ ಕಾಶ್ಮೀರವನ್ನು ಮುಕ್ತಗೊಳಿಸುವಂತೆ ಕೇಳಿದ್ದೆ. ನಾನು ಯಾವುದೇ ಸಂಘಟನೆಯೊಂದಿಗೂ ಕೈಜೋಡಿಸಿಲ್ಲ. ನಾನು ಅತ್ಯಂತ ಸರಳ ವ್ಯಕ್ತಿ. ದೇಶದ ಆಗುಹೋಗುಗಳ ಬಗ್ಗೆ ಆಸಕ್ತಿಯುಳ್ಳವಳಾಗಿದ್ದೇನೆ. ದ್ವೇಷ ಬಿತ್ತುವ ಯಾವುದೇ ಉದ್ದೇಶ ನನಗಿಲ್ಲ ಎಂದು ನಳಿನಿ ಹೇಳಿದ್ದಾರೆ. 

ಪೊಲೀಸರ ವಿಚಾರಣೆಗೆ ಸಹಕಾರ ನೀಡಲು ಸಿದ್ಧಳಿದ್ದೇನೆ. ಅಗತ್ಯ ಬಂದಾಗ ವಿಚಾರಣೆಗೆ ಹಾಜರಾಗುತ್ತೇನೆ. ಪೊಲೀಸ್  ಇಲಾಖೆಗೆ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ. 

SCROLL FOR NEXT