ರಾಜ್ಯ

ಗಂಗಾವತಿ: ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

Lingaraj Badiger

ಗಂಗಾವತಿ: ಪಹಣಿಯ 9ನೇ ಕಲಂನಲ್ಲಿ ತಿದ್ದುಪಡಿ ಮಾಡಲು ರೈತನಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕರೊಬ್ಬರು ಹಣದ ಸಮೇತ ಎಸಿಬಿ ಬಲೆಗೆ ಬಿದ್ದ ಘಟನೆ ನಗರದಲ್ಲಿ ನಡೆದಿದೆ.

ನಗರದ ಮಿನಿವಿಧಾನಸೌಧಲ್ಲಿ ರೈತ ಎಂಕೆ.ಖಾನ್ ಎಂಬುವವರಿಂದ ಆರು ಸಾವಿರ ರೂಪಾಯಿ ಲಂಚ ಪಡೆಯುವಾಗ ವೆಂಕಟಗಿರಿಯ ಕಂದಾಯ ನಿರೀಕ್ಷಕ ವಿಜಯಕುಮಾರ ಎಂಬುವವರು ಎಸಿಬಿ ಟ್ರಾಪ್ ಆಗಿದ್ದಾರೆ.

ಬಸವಪಟ್ಟಣ ಗ್ರಾಮದ ಸರ್ವೇ ನಂಬರ್ 76/6 ರಲ್ಲಿರುವ ರೈತನ ಪಹಣಿಯ 9ನೇ ಕಲಂನಲ್ಲಿ ಮೋಹಿನ್ ಪಾಷಾ ತಂದೆ ಮೈನುದ್ದೀನ್ ಪಾಷಾ ಎಂದು ಇರಬೇಕಿತ್ತು. ಆದರೆ ಮೋಹನ್ ಪಾಷಾ ತಂದೆ ಮೋಹನದ್ದೀನ್ ಎಂದಾಗಿದೆ. ಕಾನೂನು ಬದ್ಧವಾಗಿ ಬದಲಿಸಿಕೊಡುವಂತೆ ರೈತ ಕೇಳಿದ್ದಕ್ಕೆ ಅಧಿಕಾರಿ ಹತ್ತು ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲಂಚದ‌ ಮುಂಗಡ ಆರು ಸಾವಿರ ರೂಪಾಯಿ ಕೊಡುವಾಗ ಬಲೆ‌ಬೀಸಿದ ಎಸಿಬಿ ಅಧಿಕಾರಿಗಳು ಹಣದ ‌ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

ಎಸಿಬಿ ಪ್ರಭಾರಿ ಡಿವೈಎಸ್ಪಿ ಚಂದ್ರಕಾಂತ್ ಪೂಜಾರಿ ನೇತೃತ್ವದಲ್ಲಿ ದಾಳಿ ಮಾಡಿದರು. ಪಿಐಗಳಾದ ಬೀಳಗಿ ಸಿದ್ದಪ್ಪ, ಗುರುನಾಥ ಹಾಗೂ ಸಿಬ್ಬಂದಿ ಇದ್ದರು.

SCROLL FOR NEXT