ರಾಜ್ಯ

ಪ್ರಧಾನಿ ಪರೀಕ್ಷಾ ಪೆ ಚರ್ಚಾ: ರಾಜ್ಯದ 42 ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಉತ್ತಮ ಬೆಳವಣಿಗೆ - ಸುರೇಶ್ ಕುಮಾರ್

Srinivas Rao BV

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶಾಲಾ ಮಕ್ಕಳ ಜತೆ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಜ್ಯದ 42 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಈ ಪೈಕಿ 27 ಮಕ್ಕಳು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಎನ್ನುವುದು ವಿಶೇಷ. ರಾಜ್ಯದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರಿ ಶಿಕ್ಷಕರ ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ ಎನ್ನುವುದನ್ನು ಇದು ಸಾಬೀತುಮಾಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ದೇಶಾದ್ಯಂತ ೨ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಭಾಗವಹಿಸಲಿದ್ದಾರೆ. ೫೦ಕ್ಕೂ ಹೆಚ್ಚು ದಿವ್ಯಾಂಗ ಮಕ್ಕಳು ಸಹ ಈ ಬಾರಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದರು.

ಸೋಮವಾರ ದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪರೀಕ್ಷೆಗಳನ್ನು ಯಾವುದೇ ಆತಂಕವಿಲ್ಲದೆ ಆತ್ಮವಿಶ್ವಾಸದೊಂದಿಗೆ ಎದುರಿಸುವ ಬಗ್ಗೆ ಪ್ರಧಾನಮಂತ್ರಿ ಅವರು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಲಿದ್ದಾರೆ. ೨೦೧೮ರ ಫೆಬ್ರವರಿಯಲ್ಲಿ ನಡೆದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಮೊದಲ ಆವೃತ್ತಿಯಲ್ಲಿ ಅಧ್ಯಯನಕ್ಕೆ ಏಕಾಗ್ರತೆಯ ಮಹತ್ವ ಹಾಗೂ ಅದನ್ನು ಸಾಧಿಸುವ ಮಾರ್ಗೋಪಾಯಗಳ ಬಗ್ಗೆ ಸಹ ಪ್ರಧಾನಿ ಮಕ್ಕಳಿಗೆ ಕಿವಿ ಮಾತು ಹೇಳಿದ್ದರು.

ಪ್ರಧಾನಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ನಗರದ ಸಹಕಾರ ನಗರದ ನಾರಾಯಣ ಒಲಿಂಪಿಯಾಡ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಶಿವಾನಿ, ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಉತ್ಸುಕತೆಯಿಂದ ಎದುರು ನೋಡುತ್ತಿದ್ದೇನೆ. ಕಾರ್ಯಕ್ರಮದಲ್ಲಿ ತಾವು ಕೇಳಲಿರುವ ಪ್ರಶ್ನೆಯನ್ನು ಪ್ರಧಾನಿ ಕಾರ್ಯಾಲಯ ಆಯ್ಕೆಮಾಡಿಕೊಂಡಿರುವುದರಿಂದ ತಮ್ಮ ಸಂತಸ ಇಮ್ಮಡಿಗೊಂಡಿದೆ ಎಂದರು.

ಶಾಲೆಯ ಪ್ರಾಂಶುಪಾಲರಾದ ರಮಣಿ ಎನ್ ವಲ್ಲೂರಿ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆಯೋಜಿಸುತ್ತಿರುವ ಈ ಕಾರ್ಯಕ್ರಮ ಅತ್ಯುತ್ತಮವಾದದ್ದು. ನಮ್ಮ ಶಾಲೆ ವಿದ್ಯಾರ್ಥಿ ಆಯ್ಕೆಯಾಗಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದರು.

SCROLL FOR NEXT