ರಾಜ್ಯ

ಅಮಿತ್ ಶಾ ಜೊತೆ ಸಂಪುಟ ವಿಸ್ತರಣೆ ಕುರಿತು ಚರ್ಚೆಯಾಗಿದೆ; ದಾವೋಸ್‌ನಿಂದ ಬಂದ ಬಳಿಕ ವಿಸ್ತರಣೆ ಖಚಿತ: ಸಿಎಂ ಯಡಿಯೂರಪ್ಪ

Srinivasamurthy VN

ಬೆಂಗಳೂರು: ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಅರ್ಧ ಗಂಟೆಗಳ ಕಾಲ ಸವಿಸ್ತಾರವಾಗಿ ಚರ್ಚೆ ನಡೆಸಲಾಗಿದ್ದು, ಅಧ್ಯಕ್ಷರಿಂದ ಉತ್ತಮ ಸ್ಪಂದನೆ ದೊರೆತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ದಾವೋಸ್‌ಗೆ ತೆರಳುವ ಮುನ್ನ ನಗರದ ಧವಳಗಿರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ದಾವೋಸ್ ನಿಂದ ಬರುತ್ತಿದ್ದಂತೆ ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇನೆ. ಮಂತ್ರಿಮಂಡಲ ವಿಸ್ತರಣೆಗೆ ಯಾವುದೇ ಅಡ್ಡಿ ಆತಂಕ ಇಲ್ಲ ಎಂದರು.

ಈ ಸಂಬಂಧ ಅಮಿತ್ ಶಾ ಅವರೊಂದಿಗೆ ಎರಡು ಬಾರಿ ಮಾತನಾಡಿದ್ದೇನೆ. ಸಂಪುಟ ವಿಸ್ತರಣೆಗೆ ಯಾವುದೇ ಸಮಸ್ಯೆ ಇಲ್ಲ. ದಾವೋಸ್ ನಿಂದ ಬಂದ ನಂತರ ಮತ್ತೆ ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನು ಮತ್ತೊಮ್ಮೆ ಔಪಚಾರಿಕವಾಗಿ ಭೇಟಿ ಆಗಲಿದ್ದೇನೆ. ನಾಲ್ಕು ದಿನಗಳ ಕಾಲ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಾವೋಸ್ ಕಡೆ ಪ್ರಯಾಣ ಬೆಳೆಸಿದ್ದು, ರಾಜ್ಯಕ್ಕೆ ಹೂಡಿಕೆ ತರಲು ವಿಶೇಷವಾದ ಪ್ರಯತ್ನ ನಡೆಸಿ ಹೂಡಿಕೆದಾರರು ಹಾಗು ಕೈಗಾರಿಕೋದ್ಯಮಿಗಳ ಜೊತೆ ಸಂವಾದ ನಡೆಸುವುದಾಗಿ ಹೇಳಿದರು.

ಇನ್ನು ಸಿಎಎ ಜಾಗೃತಿ ಸಮಾವೇಶಕ್ಕಾಗಿ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿದ್ದು, ಇದೇ ವೇಳೆ ನಿರೀಕ್ಷೆಯಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಶಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಸಂಪುಟ ವಿಸ್ತರಣೆಗೆ ನನ್ನ ಅಭ್ಯಂತರವಿಲ್ಲ. ಸಂಪುಟ ವಿಸ್ತರಣೆ ಮಾಡಿ. ಗೆದ್ದ ಎಲ್ಲ ಶಾಸಕರನ್ನೂ ಮಂತ್ರಿ ಮಾಡಿ. ದಾವೋಸ್​ಗೆ ಹೋಗಿ ಬಂದ ಬಳಿಕ ದೆಹಲಿಗೆ ಬನ್ನಿ ಮಾತನಾಡೋಣ ಎಂದು ಸಿಎಂ ಬಿಎಸ್​ವೈಗೆ ಅಮಿತ್ ಶಾ ಅಭಯ ನೀಡಿದ್ದಾರೆ ಎನ್ನಲಾಗಿದೆ.

SCROLL FOR NEXT