ರಾಜ್ಯ

ಜಿಲ್ಲಾಧಿಕಾರಿಗಳನ್ನು 'ಕಲೆಕ್ಟರ್' ಎಂದು ಕರೆಯಲು ಚಿಂತನೆ: ಆರ್. ಅಶೋಕ್

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಜಿಲ್ಲಾಧಿಕಾರಿಗಳ ಹೆಸರನ್ನು ಬದಲಾವಣೆ ಮಾಡಲು ತೀರ್ಮಾನಿಸಿದ್ದು, ಜಿಲ್ಲಾಧಿಕಾರಿ ಹೆಸರನ್ನು " ಕಲೆಕ್ಟರ್ " ಎಂದು ನಾಮಕರಣ ಮಾಡಲು ಚಿಂತನೆ ನಡಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. 


ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದ ಎಲ್ಲಾ ಕಡೆ ಜಿಲ್ಲಾಧಿಕಾರಿಗಳನ್ನು ಕಲೆಕ್ಟರ್ ಎಂದು ಕರೆಯುತ್ತಾರೆ. ಆಂಧ್ರಪ್ರದೇಶ, ತೆಲಂಗಾಣ,  ತಮಿಳುನಾಡಿನಲ್ಲೂ ಕಲೆಕ್ಟರ್ ಎಂದು ಸಂಬೋಧಿಸುತ್ತಾರೆ. ಕಂದಾಯ ಮತ್ತು ಮಾರಾಟ ತೆರಿಗೆ, ಅಬಕಾರಿ ಇಲಾಖೆಯಲ್ಲೂ ಡಿಸಿ ಎಂದು ಕರೆಯಲಾಗುತ್ತದೆ. ಹೀಗಾಗಿ ಜಿಲ್ಲಾಡಳಿತದ ಮುಖ್ಯಸ್ಥರಾದ ಜಿಲ್ಲಾಧಿಕಾರಿಗಳನ್ನು ಇದೇ ಹೆಸರಿನಿಂದ ಕರೆಯುವುದು ಸರಿಯಲ್ಲ. ಹಾಗಾಗಿ ಕಲೆಕ್ಟರ್ ಎಂದು ಕರೆಯುವುದು ಸೂಕ್ತ ಎಂಬ ಕಾರಣದಿಂದ ನಾಮಕರಣ ಮಾಡಲು ಉದ್ದೇಶಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. 


ಭೂ ಪರಿವರ್ತನೆ ಆಗದ ಹಾಗೂ ಅಕ್ರಮ ನಿವೇಶನಗಳ ನೊಂದಣಿ ದೂರುಗಳು ಬಂದ ಹಿನ್ನೆಲೆಯಲ್ಲಿ ಕಂದಾಯ ನಿವೇಶನಗಳ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಕಂದಾಯ ಇಲಾಖೆಯ "ಕಾವೇರಿ ತಂತ್ರಾಂಶ"ದಲ್ಲೂ ಇಂತಹ ನಿವೇಶನಗಳನ್ನು ನೋಂದಣಿಗೆ ಸ್ವೀಕರಿಸುತ್ತಿಲ್ಲ. ಈ ಕುರಿತು ಪರ, ವಿರೋಧವಿದ್ದು ಸಮಗ್ರ ಮಾಹಿತಿ ಪಡೆದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

SCROLL FOR NEXT