ರಾಜ್ಯ

ಸಿನಿಮೀಯ ರೀತಿಯಲ್ಲಿ ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಇಬ್ಬರ ಬಂಧನ

Srinivasamurthy VN

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಸಿಸಿಟಿವಿಗೆ ಚೂಯಿಂಗ್ ಗಮ್ ಅಂಟಿಸಿ ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಇಬ್ಬರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ದೀಪಾಂಜಲಿನಗರದ ಎಸ್‍ಬಿಐ ಎಟಿಎಂನಲ್ಲಿ ಕಳ್ಳರು ಈ ಕೃತ್ಯವೆಸೆಗಿದ್ದಾರೆ. 100 ಕೆ.ಜಿ ತೂಕದ ಗ್ಯಾಸ್ ಕಟರ್‌ನಿಂದ ಎಟಿಎಂ ಮಿಷನ್ ಒಡೆದ ಕಳ್ಳರು ಅದರಲ್ಲಿದ್ದ 15 ಲಕ್ಷ ಹಣವನ್ನ ಬ್ಯಾಗ್‍ಗೆ ತುಂಬಿಕೊಂಡಿದ್ದರು. ಇನ್ನೇನು ಸ್ಥಳದಿಂದ ಹೊರಡಬೇಕು ಎನ್ನುವಷ್ಟರಲ್ಲಿ ಪೊಲೀಸರ ಕೈಗೆ ಖತರ್ನಾಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳು  ಶೆಟ್ಟರ್ ಬಾಗಿಲು ಮುಚ್ಚಿ ಸಿಸಿಟಿವಿಗೆ ಚೂಯಿಂಗ್ ಗಮ್ ಅಂಟಿಸಿ, ಎಟಿಎಂ ಕಿಯೋಸ್ಕ್​​​  ಒಳಗೆ ಇದ್ದ ಸಿಸಿಟಿವಿ ವೈಯರ್ ಕಟ್ ಮಾಡಿದ್ದರು. ವೈಯರ್ ಕಟ್ ಮಾಡುತ್ತಿದ್ದಂತೆ  ಮುಂಬೈನಲ್ಲಿನ ಎಸ್​ಬಿಐ ಪ್ರಧಾನ ಕಚೇರಿಗೆ ಅಲಾರಂ ಮುಖಾಂತರ ಮೆಸೇಜ್ ವೊಂದು  ರವಾನೆಯಾಗಿದೆ.  ತಕ್ಷಣವೇ ಎಸ್​ಬಿಐ ಸಿಬ್ಬಂದಿ ಮುಂಬೈನಿಂದ ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಮ್​ಗೆ ಮಾಹಿತಿ ನೀಡಿದ್ದಾರೆ.  ಈ ವೇಳೆ ಕಂಟ್ರೋಲ್ ರೂಮ್​ನಿಂದ ಬ್ಯಾಟರಾಯನಪುರ ಪೊಲೀಸರಿಗೆ ಎಟಿಎಂ ಕಳ್ಳತನಕ್ಕೆ ಯತ್ನ‌ ನಡೆಯುತ್ತಿದೆ ಎಂಬ ಮಾಹಿತಿ ಲಭಿಸಿದೆ.

ತಕ್ಷಣ  ಇನ್ಸ್‌ಪೆಕ್ಟರ್ ಲಿಂಗರಾಜ್ ಹಾಗೂ ಕ್ರೈಂ ತಂಡ, ಎಟಿಎಂ ಇದ್ದ ಸ್ಥಳಕ್ಕೆ ತೆರಳಿದಾಗ,  ಹೊರಗಿನಿಂದ ಎಟಿಎಂ ಶೆಟರ್ ಲಾಕ್ ಆಗಿದ್ದು ಕಂಡುಬಂದಿದೆ. ಬಳಿಕ ಕೆಲ ಕಾಲ ಅಲ್ಲೆ ಇದ್ದು  ಪೊಲೀಸರು ಕೈಯಲ್ಲಿ ಲಾಕ್ ಟಚ್ ಮಾಡಿದಾಗ ಎಟಿಎಂ ಲಾಕ್ ಓಪನ್ ಆಗಿದೆ. ಈ ವೇಳೆ ಕಳ್ಳರು  ಒಳಗೆ ಇರುವುದನ್ನು ದೃಢಪಡಿಸಿಕೊಂಡ  ಪೊಲೀಸರು, ಹೆಚ್ಚಿನ ಸಿಬ್ಬಂದಿಯನ್ನು ಸ್ಥಳಕ್ಕೆ  ಕರೆಸಿಕೊಂಡು ಕೇವಲ ಐದು ನಿಮಿಷದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಹಣ ಕದಿಯಲು  ಯತ್ನಿಸುತ್ತಿದ್ದ ಆರೋಪಿಗಳನ್ನು  ಬಂಧಿಸಿದ್ದಾರೆ. 

ಆರೋಪಿಗಳಿಂದ  100 ಕೆ.ಜಿಯ ಗ್ಯಾಸ್ ಕಟರ್ ಹಾಗೂ ಸ್ಕ್ರೂ ಡ್ರೈವರ್, ಫೆನ್ಸಿಂಗ್ ಕಟ್​​ ಮಾಡುವ ಕಟರ್  ಸೇರಿ ಕೃತ್ಯಕ್ಕೆ ಬಳಸಿದ ಕಾರ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಸದ್ಯ  ಸಿಕ್ಕಿಬಿದ್ದಿರುವ ಅರೋಪಿಗಳು ಬೆಂಗಳೂರಿನಲ್ಲಿ ನಾಲ್ಕು ಕಡೆ ಎಟಿಎಂಗಳಲ್ಲಿ  ಕಳ್ಳತನ  ಮಾಡಿದದರು. ಸದ್ಯ ಐದನೇ ಬಾರಿ ಎಟಿಎಂ‌ ದರೋಡೆ ಹಾಕುವಾಗ ಪೊಲೀಸರಿಗೆ  ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

SCROLL FOR NEXT