ರಾಜ್ಯ

ಕೊರೋನಾ ಎಫೆಕ್ಟ್: ಪ್ರವಾಸಿ ತಾಣಗಳಲ್ಲಿ ರೂಮ್ ಖಾಲಿಯಿದ್ದರೂ, ಬೆಂಗಳೂರಿಗರಿಗಿಲ್ಲ ಜಾಗ!

Manjula VN

ಬೆಂಗಳೂರು: ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ನಡುವಲ್ಲೇ ನಗರದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿತಾಣಗಳಲ್ಲಿರುವ ಹೋಟೆಲ್, ರೆಸಾರ್ಟ್ ಹಾಗೂ ಹೋಂ ಸ್ಟೇ ಗಳ ಮಾಲೀಕರು ಬೆಂಗಳೂರಿಗರ ಪ್ರವೇಶಕ್ಕೆ ನಿರಾಕರಿಸುತ್ತಿದ್ದಾರೆ. 

ಕೊರೋನಾ ವೈರಸ್ ಪರಿಣಾಮ ರಾಜ್ಯದ ಬಹುತೇಕ ಕಂಪನಿಗಳು ವರ್ಕ್ ಫ್ರಮ್ ಹೋಮ್ ಅಳವಡಿಸಿಕೊಂಡಿವೆ. ಇದಲ್ಲದೆ, ಲಾಕ್'ಡೌನ್ ಸಡಿಲಗೊಂಡಿದ್ದು, ಈಗಷ್ಟೇ ಜನರು ಹೊರ ಹೋಗುವ ಮನಸ್ಸು ಮಾಡಿದ್ದಾರೆ. 

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಸಕಲೇಶಪುರ, ಸಾಗರ ಹಾಗೂ ಮಡಿಕೇರಿಯ ಇತರೆ ಸ್ಥಳಗಳ ಫೋಟೋಗಳು, ವಿಡಿಯೋಗಳು ಹರಿದಾಡುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ನಡುವೆ ಪ್ರವಾಸಕ್ಕೆಂದು ತೆರಳಿದ್ದ ಜನರ ದುರ್ವರ್ತನೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಾಹಸ ಪ್ರವಾಸ ಸಂಘಟಕ ಬಾಲಾಜಿ ಡಿ ಎಂಬುವವರು ಮಾತನಾಡಿ, ರಜೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಲು ಬೆಂಗಳೂರಿಗರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಎಲ್ಲಿಯೂ ತಮಗೆ ವಸತಿ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಒಂದು ದಿನದ ಪ್ರವಾಸವಾದರೂ ಕೂಡ ಬೆಂಗಳೂರಿಗರ ಪ್ರವೇಶಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಹೇಳಿದ್ದಾರೆ. 

ಸೋಂಕು ಸಮುದಾಯ ಹಂತಕ್ಕೆ ತಲುಪುವ ಕುರಿತು ಸ್ಥಳೀಯರು ಭೀತಿಗೊಳಗಾಗಿದ್ದಾರೆ. ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗಾಗಲೇ ಸಮುದಾಯ ಹಂತ ತಲುಪಿರುವ ಕುರಿತು ಸುದ್ದಿಗಳು ಪ್ರಕಟಗೊಳ್ಳುತ್ತಿದೆ. ನಾನು ಸಣ್ಣ ಟೌನ್ ನಲ್ಲಿದ್ದು, ಇಲ್ಲಿ ಈಗಾಗಲೇ ಆರೋಗ್ಯ ವ್ಯವಸ್ಥೆಗಳು ಅತ್ಯಂತ ಕಡಿಮೆಯಿದೆ. ಪ್ರವಾಸಿಗರು ಇಲ್ಲಿಗೆ ಬಂದು ವೈರಸ್ ಹರಡಿ ಹೋದರೆ, ನಾವು ಸಂಕಷ್ಟಕ್ಕೊಳಗಾಗಬೇಕಾಗುತ್ತದೆ. ನಮ್ಮ ತಾಣಕ್ಕೆ ಯಾರೂ ಬರುವುದು ಬೇಡ. ನಷ್ಟವಾದರೂ ನಾವು ಅದನ್ನು ಭರಿಸುತ್ತೇವೆ. ಕುಟುಂಬಸ್ಥರು ಹಾಗೂ ಸ್ನೇಹಿತರ ಸುರಕ್ಷತೆಯಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ ಎಂದು ಚಿಕ್ಕಮಗಳೂರಿನ ಹೋಟೆಲ್ ಮಾಲೀಕ ಪವನ್ ಪಿ ಎಂಬುವವರು ತಿಳಿಸಿದ್ದಾರೆ. 

ಪ್ರವಾಸಿತಾಣಗಳಿಗೆ ಜನರನ್ನು ಪ್ರವೇಶಿಸುವುದು ಹಾಗೂ ನಿರ್ಬಂಧಿಸುವ ನಿರ್ಧಾರವನ್ನು ಆಯಾ ಸ್ಥಳೀಯ ಆಡಳಿತ ಮಂಡಳಿ ತೆಗೆದುತೊಳ್ಳುತ್ತದೆ. ಕೊಡಚಾದ್ರಿ ಸೇರಿದಂತೆ ಇನ್ನಿತರೆ ಪ್ರದೇಶಗಳಿಗೆ ಬೆಂಗಳೂರಿಗರ ಪ್ರವೇಶಕ್ಕೆ ನಿರಾಕರಿಸುತ್ತಿರುವುುದು ನಿಜ. ಆದರೆ, ಸೋಂಕಿತ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆಯೇ ಪರಿಸ್ಥಿತಿ ಸರಿಹೋಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿಯವರು ಹೇಳಿದ್ದಾರೆ. 

SCROLL FOR NEXT