ರಾಜ್ಯ

ಕೋವಿಡ್-19 ಸಮಯದಲ್ಲಿ ಪ್ರವಾಸ ಹೋಗಲು ಸಾಧ್ಯವಾಗುತ್ತಿಲ್ಲವೇ? ಸರ್ಕಾರ ಒದಗಿಸುತ್ತಿದೆ ವರ್ಚುವಲ್ ಟೂರಿಸಂ!

Sumana Upadhyaya

ಹುಬ್ಬಳ್ಳಿ: ಕೋವಿಡ್-19 ಸಮಯದಲ್ಲಿ ಈ ಬಾರಿ ಹಲವರಿಗೆ ತಮ್ಮ ಇಷ್ಟದ ಸ್ಥಳಗಳಿಗೆ ಹೋಗಲು ಸಾಧ್ಯವಾಗದಿರಬಹುದು. ಪ್ರವಾಸೋದ್ಯಮಕ್ಕೆ ಇದರಿಂದ ಭಾರೀ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಪ್ರವಾಸಿ ಪ್ರಿಯರಿಗೆ ದೇವಸ್ಥಾನಗಳು, ಸ್ಮಾರಕಗಳು, ಜಲಪಾತಗಳ ವರ್ಚುವಲ್ ಪ್ರವಾಸ ಸೌಲಭ್ಯವನ್ನು ಕಲ್ಪಿಸಿಕೊಡಲಿದೆ.

ಪ್ರವಾಸೋದ್ಯಮವನ್ನು ಉತ್ತೇಜಿಸಲು 360 ಡಿಗ್ರಿ ಫೋಟೋಗ್ರಾಫ್ಸ್ ನಲ್ಲಿ ಸ್ಮಾರಕಗಳು, ದೇವಸ್ಥಾನಗಳು ಮತ್ತು ಇತರ ಸ್ಥಳಗಳಿಗೆ ವರ್ಚುವಲ್ ಟೂರ್ ಮಾಡಿಸಲಿದೆ. ಡ್ರೋನ್ ವಿಡಿಯೊ ಸಹಾಯವನ್ನು ಪಡೆಯಲಿದ್ದಾರೆ. ಹಂಪಿಯಲ್ಲಿ ಈಗಾಗಲೇ ಕೆಲಸ ಆರಂಭವಾಗಿದ್ದು ಇಲ್ಲಿನ ಸ್ಮಾರಕಗಳ ಫೋಟೋಗ್ರಫಿ ಮತ್ತು ವಿಡಿಯೊಗ್ರಫಿ ಪ್ರಕ್ರಿಯೆ ನಡೆಯುತ್ತಿದೆ.

ಈ ಸಂಬಂಧ ಪ್ರವಾಸೋದ್ಯಮ ಮತ್ತು ಎಎಸ್ಐ ಅಧಿಕಾರಿಗಳ ನಡುವೆ ಕಳೆದ ವಾರ ಸಭೆ ನಡೆದಿತ್ತು. ಅದರಲ್ಲಿ ಇಂಟರ್ನೆಟ್ ನಲ್ಲಿ ಪ್ರವಾಸಿಪ್ರಿಯರಿಗೆ ಕರ್ನಾಟಕದ ಪರಂಪರೆಯನ್ನು ತೋರಿಸುವುದೆಂದು ನಿರ್ಧರಿಸಲಾಯಿತು. ಸ್ಮಾರಕಗಳ ದಾಖಲೆಗೆ ಅತಿ ಉನ್ನತ ಗುಣಮಟ್ಟದ ಸಾಧನಗಳನ್ನು ಬಳಸಲಾಗುತ್ತಿದ್ದು ಹಂಪಿಯಲ್ಲಿ ಈಗಾಗಲೇ ಕೆಲಸ ಆರಂಭವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದರು.

ಸ್ಮಾರಕಗಳು, ಪಾರಂಪರಿಕ ಸ್ಥಳಗಳ ನಂತರ ಜಲಪಾತಗಳ ವರ್ಚುವಲ್ ಟೂರ್ ಮಾಡಿಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಪಶ್ಚಿಮ ಘಟ್ಟಗಳು ಮತ್ತು ಕ್ಯಾಸ್ಕೇಡ್ ಗಳ ವರ್ಚುವಲ್ ಟೂರ್ ನ್ನು ಸಹ ಮಾಡಿಸಲಿದೆ. ಅವು ಇನ್ನೂ ಆರಂಭಿಕ ಹಂತಗಳಲ್ಲಿದೆ. ಸದ್ಯ ಹಂಪಿ, ಗೋಲ ಗುಂಬಜ್, ಬೇಲೂರು ಮತ್ತು ಹಳೆಬೀಡು ಮತ್ತು ಇತರ ಸ್ಮಾರಕಗಳ ವರ್ಚುವಲ್ ಟೂರ್ ಮಾಡಿಸಲಾಗುತ್ತದೆ.

ಹಂಪಿಯ ಸ್ಮಾರಕಗಳನ್ನು 3ಡಿಯಲ್ಲಿ ಕೆಲ ವರ್ಷಗಳ ಹಿಂದೆ ಮಾಡಲಾಗಿತ್ತು. ಇನ್ನು ಹೊಸ ವರ್ಚುವಲ್ ಪ್ರವಾಸೋದ್ಯಮಕ್ಕೆ ಸ್ಮಾರಕಗಳನ್ನು ದಾಖಲೆ ಮಾಡಲಾಗುತ್ತದೆ. ವಿಡಿಯೊ ಮತ್ತು ಫೋಟೋಗಳು ಸಿದ್ದವಾಗಿದ್ದು ಸರ್ಕಾರದಿಂದ ಅನುಮತಿ ಸಿಗಬೇಕಿದೆ. ಹಂಪಿಗೆ ಹೋಗಿ ಖುದ್ದಾಗಿ ನೋಡಿದಷ್ಟು ಇಂಟರ್ನೆಟ್ ನಲ್ಲಿ ನೋಡಿದರೆ ಖುಷಿ ಸಿಗಲಿಕ್ಕಿಲ್ಲ, ಆದರೂ ಪ್ರವಾಸಿಗರಲ್ಲಿ ಕೌತುಕ ಹುಟ್ಟಿಸಲು ಸಹಾಯವಾಗಬಹುದು ಎಂದು ಹಂಪಿ ಸ್ಮಾರಕ ನಿರ್ವಹಣೆ ಪ್ರಾಧಿಕಾರದ ಅಧಿಕಾರಿಯೊಬ್ಬರು ಹೇಳುತ್ತಾರೆ.

SCROLL FOR NEXT