ರಾಜ್ಯ

ಕೊರೋನಾ ಎಫೆಕ್ಟ್: ಅತಂತ್ರದಲ್ಲಿ ಸ್ವಸಹಾಯ ಗುಂಪುಗಳ ಸಾವಿರಾರು ಮಹಿಳೆಯರ ಬದುಕು

Sumana Upadhyaya

ಮೈಸೂರು: ಕೋವಿಡ್-19 ಹಲವು ಕ್ಷೇತ್ರಗಳ ಜನತೆಗೆ ಹಲವು ರೀತಿಯಲ್ಲಿ ಸಂಕಷ್ಟಗಳನ್ನು ತಂದೊಡ್ಡಿದೆ. ಬದುಕು ದುಸ್ತರವಾಗಿದೆ. ಅದರಲ್ಲಿ ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳ ಮಹಿಳೆಯರು, ಅದರ ಮೂಲಕ ಸಾಲ ಪಡೆದು ಉದ್ಯಮವನ್ನು ಆರಂಭಿಸಿದ ಮಹಿಳೆಯರು ಕೂಡ ಇದ್ದಾರೆ.

ಸ್ವಸಹಾಯ ಗುಂಪುಗಳ ಮೂಲಕ ಉದ್ಯಮಗಳನ್ನು ಆರಂಭಿಸಿ ಬದುಕು ಕಟ್ಟಿಕೊಂಡ ಮಹಿಳೆಯರು ಅದೆಷ್ಟೋ ಮಂದಿ. ಆದರೆ ಕೊರೋನಾ ಲಾಕ್ ಡೌನ್ ನಿಂದ ಸಂಚಾರ, ಸಾಗಣೆ ಸೌಕರ್ಯಗಳಿಲ್ಲದೆ ಮಾರುಕಟ್ಟೆಯಿಲ್ಲದೆ ಮಹಿಳೆಯರಿಗೆ ತಮ್ಮ ಉತ್ಪನ್ನಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಿ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಉತ್ಪತ್ತಿಯಿಲ್ಲ, ಉತ್ಪತ್ತಿಯಿಲ್ಲದೆ ತಾವು ಪಡೆದ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ.

ಮೈಸೂರು ಜಿಲ್ಲೆಯೊಂದರಲ್ಲಿಯೇ 12 ಸಾವಿರಕ್ಕೂ ಅಧಿಕ ಸ್ವಸಹಾಯ ಗುಂಪುಗಳಿವೆ. ಸಾವಿರಾರು ಮಹಿಳೆಯರು ಇದರಡಿ ಬದುಕು ಕಂಡುಕೊಂಡಿದ್ದರು. ಇವರಿಗೆ ತಾಂತ್ರಿಕ ಮತ್ತು ಕೌಶಲ್ಯ ತರಬೇತಿ ನೀಡುತ್ತಿದ್ದ 80ಕ್ಕೂ ಹೆಚ್ಚು ಸರ್ಕಾರೇತರ ಸಂಘಟನೆಗಳು ಕೂಡ ಕೋವಿಡ್ -19ನಿಂದ ತೊಂದರೆ ಅನುಭವಿಸುತ್ತಿವೆ. ಮಹಿಳೆಯರಿಗೆ ಅಭಿವೃದ್ಧಿಪರ ಕೆಲಸಗಳನ್ನು ಮಾಡಲು ಎನ್ ಜಿಒಗಳಿಗೆ ಹಣ ಬರುತ್ತಿಲ್ಲ, ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ.

ಶಕ್ತಿ ಸ್ವಸಹಾಯ ಸಂಘದ ಸದಸ್ಯೆ ಸರಳಾ, ಕೋವಿಡ್-19ನಿಂದ ನಮ್ಮ ಬದುಕು ದುಸ್ತರವಾಗಿದೆ. ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದ ಮಹಿಳೆಯರ ಬದುಕು ಮತ್ತೆ ಕಷ್ಟವಾಗಿದೆ. ಮಾರುಕಟ್ಟೆ ಸೌಲಭ್ಯವಿಲ್ಲದಿರುವುದರಿಂದ ನಮಗೆ ಬಹಳ ಕಷ್ಟವಾಗುತ್ತಿದೆ. ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಜೀವನ ಸಹಜ ಸ್ಥಿತಿಗೆ ಮರಳಲು ಇನ್ನು ಕೆಲ ವರ್ಷಗಳೇ ಬೇಕಾಗಬಹುದು ಎನ್ನುತ್ತಾರೆ.

ಗ್ರಾಮೀಣ ಶಿಕ್ಷಣ ಅಭಿವೃದ್ಧಿ ಮತ್ತು ಸೃಜನಾತ್ಮಕ ತಂತ್ರಜ್ಞಾನಗಳ ಕೇಂದ್ರ(ಕ್ರೆಡಿಟ್-ಇ) ಸಿಇಒ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ ಎಂಪಿ ವರ್ಷ, ರಾಜ್ಯದಲ್ಲಿ ದಿನೇ ದಿನೇ ಕೋವಿಡ್-19 ಕೇಸುಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾರೆ ಎಂದರು.

ಸ್ವಸಹಾಯ ಗುಂಪುಗಳು ಕೆಲಸ ಮಾಡುತ್ತಿಲ್ಲ, ತೆಗೆದುಕೊಂಡ ಸಾಲವನ್ನು ಹಿಂತಿರುಗಿಸುವುದು ಮತ್ತೊಂದು ಸವಾಲು ಎನ್ನುತ್ತಾರೆ ವರ್ಷ.

ಮೈಸೂರು ತಾಲ್ಲೂಕಿನ ಸಾಮಾಜಿಕ ಕಾರ್ಯಕರ್ತೆ ನಳಿನಿ, ಸ್ವಸಹಾಯ ಗುಂಪುಗಳಿಗೆ ಮಹಿಳೆಯರಿಗೆ ಪ್ರಯೋಜನವಾಗಿರುವುದೇ ಹೆಚ್ಚು. ಆದರೆ ಕೋವಿಡ್-19 ಇದೀಗ ಮಹಿಳೆಯರನ್ನು ಮತ್ತೆ 10 ವರ್ಷ ಹಿಂದಕ್ಕೆ ಕೊಂಡೊಯ್ದಿದೆ. ಈ ಸಂದರ್ಭದಲ್ಲಿ ಮಹಿಳೆಯರನ್ನು ಸಶಕ್ತೀಕರಣಗೊಳಿಸುವುದು ಮುಖ್ಯ, ಆನ್ ಲೈನ್ ನಲ್ಲಿ ಉತ್ಪನ್ನಗಳ ಮಾರಾಟದ ಬಗ್ಗೆ ಹೇಳಿಕೊಡಬೇಕಾಗಿದೆ ಎಂದರು.

SCROLL FOR NEXT