ರಾಜ್ಯ

ಕೊರೋನಾ ವೈರಸ್ ಕುರಿತು ಜನರಲ್ಲಿ ಆತ್ಮಸ್ಥೈರ್ಯ ತುಂಬಿ: ಬಿಬಿಎಂಪಿ ಸದಸ್ಯರಿಗೆ ಸಚಿವ ಸುರೇಶ್ ಕುಮಾರ್ ಪತ್ರ

Srinivasamurthy VN

ಬೆಂಗಳೂರು: ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಬಹಳ ಸುಸ್ತಾಗುತ್ತಿದ್ದು, ಇಂತಹ ವೇಳೆಯಲ್ಲಿ ನಾವೆಲ್ಲಾ ಅವರಿಗೆ "ನಿಮ್ಮೊಡನಿದ್ದೇವೆ" ಎಂಬ ಸ್ಥೈರ್ಯ ತುಂಬಬೇಕಿದೆ ಎಂದು ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ಚುನಾವಣೆಯಲ್ಲಿ ಜನ ನಮಗೆ ಮತ ನೀಡಿ ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಿದ್ದು, ಅವರ ಋಣ ನಮ್ಮ ಮೇಲಿದೆ. ಈ ಋಣವನ್ನು ಈಡೇರಿಸಲು ನಮಗೆ ಈಗ ಒಂದು ಚಿಕ್ಕ ಅವಕಾಶ ದೊರೆತಿದೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ನಾವು ಕೂಡಲೇ ಕಾರ್ಯಪ್ರವೃತ್ತರಾಗಿ ನಮ್ಮ ವಾರ್ಡಿನ ಪ್ರತಿಯೊಬ್ಬರಿಗೆ ಧೈರ್ಯ ಮತ್ತು ಧನಾತ್ಮಕವಾದ ಗುಣಗಳನ್ನು ತುಂಬಬೇಕು ಹಾಗೂ ಕೊರೊನಾ ವಾರಿಯರ್ಸ್‌ಗಳಿಗೆ ನಾವು ಜೊತೆಯಾಗಿ ನಿಮ್ಮ ಜೊತೆಯಲ್ಲಿ ನಾವುಗಳಿದ್ದೇವೆ ಎಂದು ಅವರಿಗೆ ಆತ್ಮಸ್ಥೈರ್ಯವನ್ನು ತುಂಬಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಕ್ಷೇತ್ರದ ಬಿಬಿಎಂಪಿ ಸದಸ್ಯ ಜಿ.ಕೃಷ್ಣಮೂರ್ತಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಕಳೆದ ಮೂರು ತಿಂಗಳುಗಳಿಂದ ಕೊರೊನಾ ವೈರಸ್ ಸೋಂಕು ದೇಶದಲ್ಲಿ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಹಾಗೂ ನಮ್ಮ ರಾಜಾಜಿನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ವೈರಸ್ ಸೋಂಕಿನಿಂದ ಜನತೆ ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಬಹಳ ಆತಂಕದಿಂದ ಜೀವನ ನಡೆಸುತ್ತಿದ್ದಾರೆ. ಇದು ಜನರಿಗೆ ಜೀವ ಮತ್ತು ಜೀವನದ ಸಂಘರ್ಷವಾಗಿ ಪರಿಣಮಿಸಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ಮಾಡುತ್ತಿರುವ ಕೊರೋನಾ ವಾರಿಯರ್ಸ್ ಬಹಳ ಸುಸ್ತಾಗುತ್ತಿದ್ದಾರೆ. ಮೂರು ತಿಂಗಳಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ಇವರ ಚೈತನ್ಯ ಕುಸಿಯುತ್ತಿದೆ. ಇದರೊಂದಿಗೆ ಇವರು ಎದುರಿಸುತ್ತಿರುವ ಸಮಸ್ಯೆ, ಟೀಕೆಗಳು ಅಪಾರ. ಇಂತಹ ವೇಳೆಯಲ್ಲಿ ನಾವೆಲ್ಲಾ ಅವರಿಗೆ "ನಿಮ್ಮೊಡನಿದ್ದೇವೆ" ಎಂಬ ಸ್ಥೈರ್ಯ ತುಂಬಬೇಕಿದೆ ಎಂದು ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

SCROLL FOR NEXT