ರಾಜ್ಯ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎರಡು ಸೀಟ್ ಬುಕ್: ಪ್ರಯಾಣಿಕರಿಗೆ ಡಬಲ್ ಟ್ರಬಲ್ ನೀಡಿದ ಇಂಡಿಗೋ ವಿರುದ್ಧ ಸಾರ್ವಜನಿಕರ ವಿರೋಧ

Manjula VN

ಬೆಂಗಳೂರು: ವಿಮಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎರಡು ಸೀಟುಗಳನ್ನು ರಿಯಾಯಿತಿ ದರದಲ್ಲಿ ಬುಕ್ ಮಾಡಿಕೊಳ್ಳುವ ಸೌಲಭ್ಯ ಒದಗಿಸಿದ ಇಂಡಿಗೋ ಸಂಸ್ಥೆ ವಿರುದ್ಧ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಇಂಡಿಗೋ ಸಂಸ್ತೆಯು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇಚ್ಛಿಸುವ ವ್ಯಕ್ತಿಯೊಬ್ಬರು ಪ್ರಯಾಣದ ವೇಳೆ ಏಕಕಾಲದಲ್ಲಿ ಎರಡು ಸೀಟುಗಳನ್ನು ಬುಕ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಆರಂಭಿಸಿತ್ತು. ಅಲ್ಲದೆ, ಟಿಕೆಟ್ ಬುಕ್ ಮಾಡಿಕೊಳ್ಳಲು ರಿಯಾಯಿತಿಯನ್ನೂ ನೀಡಿತ್ತು. ಇದಕ್ಕೆ ಸಾರ್ವಜನಿಕರು ತೀವ್ರ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 

ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗಟ್ಟಲು ಮಧ್ಯದಲ್ಲಿರುವ ಸೀಟುಗಳನ್ನು ಖಾಲಿಯಾಗಿಯೇ ಬಿಡುವಂತೆ ವಿಮಾನಯಾನ ಸಂಸ್ಥೆಗಳಿಗೆ ಈ ಹಿಂದೆ ಡಿಜಿಸಿಎ ತಿಳಿಸಿತ್ತು. ಮೂರನೇ ಒಂದು ಭಾಗದಷ್ಟು ಸೀಟುಗಳನ್ನು ಖಾಲಿ ಬಿಡುವುದು ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ವಿಮಾನಯಾನ ಸಂಸ್ಥೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಈ ಪ್ರತಿಕ್ರಿಯೆ ಬಳಿಕ ಡಿಜಿಸಿಎ ಪ್ರಸ್ತಾಪವನ್ನು ಹಿಂತೆಗೆದುಕೊಂಡಿತ್ತು. 

ಎರಡು ಸೀಟುಗಳ ಬುಕ್ ಮಾಡಿಕೊಳ್ಳುವ ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದು, ಹೀಗಾಗಿ ಈ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಇಂಡಿಗೋ ತಿಳಿಸಿದೆ. 

ವಿಮಾನ ಸಂಸ್ಥೆಯ ಈ ಸೌಲಭ್ಯಕ್ಕೆ ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗುತ್ತಿವೆ. ಸೌದಿ ಅರೇಬಿಯಾ ನಿವಾಸಿ ಮೊಹಮ್ಮದ್ ನಾದಿಮ್ ಎಂಬುವವರು ಟ್ವೀಟ್ ಮಾಡಿ, ವಾಹ್, ಹೊಸ ಯೋಜನೆ. ಡಬಲ್ ಸೀಟ್. ಓರ್ವ ವ್ಯಕ್ತಿ ದುಪ್ಪಟ್ಟು ಹಣ ಪಾವತಿಸಬೇಕು... ಒಬ್ಬ ವ್ಯಕ್ತಿಗೆ 2 ಸೀಟುಗಳು ಬೇಕಾಗಿಲ್ಲ. ಜನರು ಹುಚ್ಚರಲ್ಲ. ಮುರ್ಖರನ್ನಾಗಿಸಬೇಡಿ. ಟಿಕೆಟ್ ರದ್ದು ಮಾಡಿದ್ದಕ್ಕೆ ಹಣ ಮರುಪಾವತಿಸಿ. ಕ್ರೆಡಿಟ್ ಶೆಲ್ ನಮಗೆ ಅಗತ್ಯವಿಲ್ಲ ಎಂದಿದ್ದಾರೆ. 

ವಿಮಾನ ಸಂಸ್ಥೆಯು ಈ ಸೌಲಭ್ಯದ ಮೂಲಕ ಪ್ರಯಾಣಿಕರ ಭದ್ರತೆಯನ್ನು ಅವರನ್ನ ಮೇಲೇ ಹಾಕುತ್ತಿದೆ. ನಮ್ಮ ಮೂಗಿ, ಬಾಯಿಗೆ ನಾವು ಹಣ ಖರ್ಚು ಮಾಡಬೇಕು ಎಂದು ವಿಮಾಣ ಪ್ರಯಾಣಿಕರಾಗಿರುವ ಕೃತಿಕಾ ಅವರು ಹೇಳಿದ್ದಾರೆ. 

SCROLL FOR NEXT