ರಾಜ್ಯ

ಕೋವಿಡ್-19 ಏರಿಕೆ ಹಿನ್ನೆಲೆ, ಭಕ್ತಾದಿಗಳ ಭೇಟಿಗೆ ಮುರುಘ ಮಠದಿಂದ ನಿರ್ಬಂಧ!

Srinivas Rao BV

ಚಿತ್ರದುರ್ಗ: ಕೋವಿಡ್-19 ಏರಿಕೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿರುವ ಮುರುಘ ಮಠಕ್ಕೆ ಭಕ್ತಾದಿಗಳ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಮಠದ ಮುಖ್ಯಸ್ಥರಾದ ಡಾ.ಶಿವಮೂರ್ತಿ ಮುರುಘ ಶರಣರು ತಿಳಿಸಿದ್ದಾರೆ.

ಮುರುಘ ಮಠಕ್ಕೆ ಭಕ್ತಾದಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದ್ದರೂ ಮುರುಘ ವನಕ್ಕೆ ಭಕ್ತಾದಿಗಳ ಭೇಟಿಗೆ ಥರ್ಮಲ್ ಸ್ಕ್ರೀನಿಂಗ್ ಮೂಲಕ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಮಠಾಧೀಶರು, ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಮೂಲಕ ಕೊರೋನಾ ರೋಗವನ್ನು ನಿಯಂತ್ರಿಸುವುದಕ್ಕೆ ಸಾಧ್ಯವಿದೆ ಎಂದು ತಿಳಿಸಿದ್ದಾರೆ. 

ನಾವು ಜವಾಬ್ದಾರಿ ಅರಿತು ಸುರಕ್ಷವಾಗಿರದೇ ಇದ್ದಲ್ಲಿ, ಕೊರೋನಾವನ್ನು ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ. ರಾಜ್ಯಾದ್ಯಂತ ಹಲವು ದಿನಗಳಿಂದ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಠ ಜವಾಬ್ದಾರಿ ಅರಿತು ಈ ನಿರ್ಧಾರ ಕೈಗೊಂಡಿದೆ ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ.

ಶ್ರಾವಣ ಕಾರ್ಯಕ್ರಮ ಸಾಮಾಜಿಕ ಜಾಲತಾಣದಲ್ಲಿ ಲೈವ್

ಪ್ರತಿ ವರ್ಷ ಶ್ರಾವಣ ಮಾಸದ ಅಂಗವಾಗಿ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮಗಳನ್ನು ಮಠದ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್ ಗಳಲ್ಲಿ ಲೈವ್ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಈ ಬಾರಿ ಶ್ರಾವಣ ಮಾಸದ ಕಾರ್ಯಕ್ರಮಕ್ಕೆ ನೀವಿದ್ದಲ್ಲಿಯೇ ಶ್ರಾವಣ ದರ್ಶನ ಎಂದು ನಾಮಕರಣ ಮಾಡಲಾಗಿದ್ದು, ಶಿ.ಮು.ಶ ರಿಂದ ಬೌದ್ಧಿಕ ಯಾನ ಕಾರ್ಯಕ್ರಮ ಶರಣರು, ಮಠದ ಜನರಿಗೆ ಸೀಮಿತವಾಗಿ ನಡೆಯಲಿದೆ. ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣದ ಮೂಲಕ ಶ್ರಾವಣ ಕಾರ್ಯಕ್ರಮ ವೀಕ್ಷಿಸುವ ಸೌಲಭ್ಯ ಕಲ್ಪಿಸಲಾಗುವುದು ಎಂದು ಮುರುಘ ಮಠದ ಶ್ರೀಗಳು ತಿಳಿಸಿದ್ದಾರೆ.

ಕಾಯಕ ಮತ್ತೆ ನೆನಪಿಸಿದ ಕೊರೋನಾ

12 ನೇ ಶತಮಾನದಲ್ಲಿ ಬಸವೇಶ್ವರರು ಪ್ರತಿಪಾದಿಸಿದ್ದ ಕಾಯಕವನ್ನು ಮರೆತಿದ್ದವರು ಕೋವಿಡ್-19 ನಿಂದಾಗಿ ತಮ್ಮ ಕಾಯಕದಲ್ಲಿ ವ್ಯಸ್ತರಾಗಿದ್ದಾರೆ. ಜನರಿಗೆ ತಮ್ಮ ಕಾಯಕದಲ್ಲಿ ತೊಡಗುವಂತಾಗಿರುವುದು ಒಳ್ಳೆಯದಾಗಿದೆ ಎಂದು ಮುರುಘಾ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT