ರಾಜ್ಯ

ಬೆಂಗಳೂರಿನಿಂದ ತುಮಕೂರು ಜಿಲ್ಲೆಗೆ, ನಗರಕ್ಕೆ ಆಗಮಿಸುವವರನ್ನು ಮನೆಗೆ ಸೇರಿಸಿಕೊಳ್ಳಬೇಡಿ: ಸಚಿವ ಮಾಧುಸ್ವಾಮಿ

Nagaraja AB

ತುಮಕೂರು: ಬೆಂಗಳೂರಿನಿಂದ  ಜಿಲ್ಲೆಗೆ ಅಥವಾ ನಗರಕ್ಕೆ ಬರುವವರನ್ನು ಊರಿಗೆ ಸೇರಿಸಿ ಕೊಳ್ಳಬೇಡಿ.ಅಲ್ಲಿಂದ ಬಂದವರ ಬಗ್ಗೆ ಜಿಲ್ಲಾಡಳಿತಕ್ಕೆ,ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡದಿದ್ದರೆ ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ  ಹೇಳಿದ್ದಾರೆ.

ನಗರದಲ್ಲಿಂದು ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯಲ್ಲಿ ಪಿಪಿಇ ಕಿಟ್ ವಿತರಿಸಿ ಮಾತನಾಡಿದ ಅವರು,ಕಂಟೈನ್​ಮೆಂಟ್​ ಝೋನ್​ಗಳನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ.ಈ ಬಗ್ಗೆ ಸ್ಥಳೀಯರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ ನಂತರ ಏರಿಯಾ ಸೀಲ್​ಡೌನ್ ಮಾಡುತ್ತೇವೆ ಎಂದರು.

 ಬೆಂಗಳೂರಿನಿಂದ ಬಂದವರಿಂದ ಸಮಸ್ಯೆಯಾಗುತ್ತಿದೆ.ಅವರನ್ನು ಹಳ್ಳಿಗಳಿಗೆ ಬಿಟ್ಟುಕೊಳ್ಳದಿದ್ದರೆ ಹಳ್ಳಿಗಳಲ್ಲಿ ಕೊರೋನಾ ಪ್ರಕರಣ ಬರುತ್ತಿರಲಿಲ್ಲ.ಎಲ್ಲರೂ  ಬಂದರು, ಹೋದರು ಮನೆ ಸೇರಿಕೊಂಡರೂ ಯಾರೂ ನಮಗೆ ಮಾಹಿತಿ ನೀಡಲಿಲ್ಲ. ಪಾಸಿಟಿವ್ ಬಂದಾಗ ಊರಿಗೆ ಊರೇ ಸೀಲ್​ಡೌನ್ ಮಾಡಿದ್ವಿ.ಬೆಂಗಳೂರಿನಿಂದ ಬಂದರೆ ಮಾಹಿತಿ ನೀಡಿ ಅಂತ  ಜನರಿಗೆ ಜಾಗೃತಿ ಹಾಗೂ ಪ್ರಚಾರ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಪ್ರಸ್ತುತ ಕೋವಿಡ್ ಪರೀಕ್ಷೆ ಮಾಡಿದ 48 ಗಂಟೆ ಒಳಗೆ ರಿಸಲ್ಟ್ ಕೊಡುತ್ತಿದ್ದೇವೆ.ಅಲ್ಲಿವರೆಗೂ ಬೆಂಗಳೂರಿನಿಂದ ಬಂದವರು ಯಾರ ಸಂಪರ್ಕಕ್ಕೆ ಬರಬಾರದು.ಊರಿನ ಹೊರಗೆ ಅಥವಾ ಬೇರೆಲ್ಲಾದ್ರೂ ಪ್ರತ್ಯೇಕವಾಗಿ ವಾಸ್ತವ್ಯ ಹೂಡಬೇಕು.ಪರೀಕ್ಷೆ ವರದಿ ನೆಗೆಟಿವ್ ಬಂದರೆ ಮಾತ್ರ ಮನೆಗೆ ಹೋಗಲಿ,ಪಾಸಿಟಿವ್ ಬಂದ್ರೆ ಆಸ್ಪತ್ರೆಗೆ ದಾಖಲಿಸುತ್ತೇವೆ.ಈ ಹೊರಗಿನಿಂದ ಬಂದವರು ಜಿಲ್ಲಾಡಳಿತದ ನಿಯಮಾವಳಿ ಪಾಲಿಸದಿದ್ದರೆ ಅವರ ವಿರುದ್ಧ ಎಫ್ಐ ಆರ್ ದಾಖಲಿಸಲು ಅವಕಾಶವಿದೆ.ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.

SCROLL FOR NEXT