ರಾಜ್ಯ

ಕರ್ನಾಟಕದಲ್ಲಿ ಕೊರೋನಾ ವೈರಸ್ ನ ಆರು ಪ್ರಭೇದಗಳು ಪತ್ತೆ

Srinivas Rao BV

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳು ವಿವಿಧ ಪ್ರಕಾರಗಳ ಕೊರೋನಾ ವೈರಾಣು ಇರುವುದನ್ನು ಅಲ್ಲಗಳೆಯುತ್ತಿದ್ದರೂ ಬೆಂಗಳೂರಿನಲ್ಲಿ ನಡೆದ ಅಧ್ಯಯನವೊಂದು ಇದಕ್ಕೆ ತದ್ವಿರುದ್ಧವಾದ ವರದಿಯನ್ನು ನೀಡಿದೆ. 

ಜೂ.1 ವರೆಗೆ ಸತತ ಮೂರು ತಿಂಗಳುಗಳ ಕಾಲ ಬೆಂಗಳೂರು ಮೂಲದ ನಿಮ್ಹಾನ್ಸ್ ನ ಅಧ್ಯಯನದ ಪ್ರಕಾರ ಕರ್ನಾಟಕದಲ್ಲಿ ಈಗಾಗಲೇ SARS-CoV-2 ನ ಅಭಿವೃದ್ಧಿ ಹೊಂದಿದ 6 ಪ್ರಭೇದಗಳು (ತಳಿಗಳು) ಪತ್ತೆಯಾಗಿವೆ. ಮುಂದವರೆದು ಈ ವೈರಾಣುವಿನ ಇನ್ನೂ ಹಲವು ಸ್ಟ್ರೈನ್ ಗಳು ಇರುವ ಸಾಧ್ಯತೆಗಳಿದ್ದು, ಚಿಕಿತ್ಸೆಯಲ್ಲಿ ಅಡ್ಡಿಯಾಗುತ್ತಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ನಿಮ್ಹಾನ್ಸ್ (NIMHANS) ನ ನ್ಯೂರೋವೈರಾಲಜಿ ವಿಭಾಗದಲ್ಲಿ ವೈರಾಣುವಿನ ಜೆನೆಟಿಕ್ ಸೀಕ್ವೆನ್ಸಿಂಗ್ (ವಂಶವಾಹಿಳ ಗುಚ್ಛದ ಅನುಕ್ರಮವನ್ನು ಡಿಕೋಡ್ ಮಾಡುವುದು) ನಡೆಸಲಾಗಿದೆ. 8 ಜಿಲ್ಲೆಗಳಲ್ಲಿ ರೋಗಿಗಳಿಂದ ಸಂಗ್ರಹಿಸಲಾದ ಮಾದರಿಯಿಂದ ವೈರಾಣುವಿನ ಜಿನೋಮ್ ಅಧ್ಯಯನ ನಡೆಸಲಾಗಿದ್ದು, ಮುಖ್ಯವಾಗಿ B6, B1 ಪ್ರಭೇದದ ವೈರಾಣುಗಳು ಕಂಡುಬಂದಿವೆ. 
ನಿಮ್ಹಾನ್ಸ್ ನ ನ್ಯೂರೋವೈರಾಲಜಿ ವಿಭಾಗದ ಮುಖ್ಯಸ್ಥರಾಗಿರುವ ಡಾ.ವಿ. ರವಿ ಅವರು ನೀಡಿರುವ ಮಾಹಿತಿಯ ಪ್ರಕಾರ,  SARS-CoV-2  ವೈರಸ್ ನ 47 ಪೂರ್ಣ ಜಿನೋಮ್ ನ್ನು ಅಧ್ಯಯನ ಮಾಡಲಾಗಿದೆ.

ಈ ಪೈಕಿ ಕಂಡುಬಂದಿರುವ B1  ಯುರೋಪಿನಲ್ಲಿ ವರದಿಯಾಗಿರುವುದಾಗಿದ್ದು,  B6 ಫಿಲಿಪೈನ್ಸ್, ಬ್ರಿಟನ್, ಉತ್ತರ ಅಮೆರಿಕ, ಆಸ್ಟ್ರೇಲಿಯಾ, ಸಿಂಗಪೂರ್, ಭಾರತದಲ್ಲಿ ಹೆಚ್ಚು ವರದಿಯಾಗಿದೆ. ಮಾ.5 ರಿಂದ ಜೂ.1 ರ ವರೆಗೆ ಬೆಂಗಳೂರು ನಗರ, ಗ್ರಾಮೀಣ, ಬೆಳಗಾವಿ, ಬೀದರ್, ಬಿಜಾಪುರ, ಮೈಸೂರು, ದಾವಣಗೆರೆ, ಬಾಗಲಕೋಟೆಗಳ ರೋಗಿಗಳ ಮಾದರಿಯ ಸಂಗ್ರಹದಿಂದ ನಡೆದಿರುವ ಅಧ್ಯಯನ ವರದಿಗಳು ಇವಾಗಿವೆ.

ರೋಗ ತಡೆ ಜನರ ಮೇಲೆಯೇ ಅವಲಂಬಿತವಾಗಿದ್ದು, ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ನಿರ್ಧಾರವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

SCROLL FOR NEXT