ರಾಜ್ಯ

ಕೋವಿಡ್-19: 500 ಬೆಡ್ ನೀಡಲು ಎಂಎಸ್ಆರ್ ಆಸ್ಪತ್ರೆ ಒಪ್ಪಿಗೆ: 10 ವೆಂಟಿಲೇಟರ್, 10 ಡಯಾಲಿಸಿಸ್ ಯಂತ್ರ ಬೇಡಿಕೆಗೂ ಸಮ್ಮತಿ

Srinivasamurthy VN

ಬೆಂಗಳೂರು: ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರಿಗಾಗಿ ಈಗಾಗಲೇ 340 ಹಾಸಿಗೆಗಳನ್ನು ಮೀಸಲಿಡಲಾಗಿದ್ದು,ಮುಂದಿನ ಎರಡು ವಾರದಲ್ಲಿ ಅವುಗಳನ್ನು 500 ಹಾಸಿಗೆಗಳಿಗೆ ಹೆಚ್ಚಿಸಿ ಸರ್ಕಾರದ ವಶಕ್ಕೆ ನೀಡಲು ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.

ಆಸ್ಪತ್ರೆಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರಿಗೆ ಎಂ.ಎಸ್.ರಾಮಯ್ಯ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಂ.ಆರ್. ಜಯರಾಮ್ ಅವರು ಈ ಭರವಸೆ ನೀಡದರು. ಇದೇ ವೇಳೆ ಡಿಸಿಎಂ ಅವರು ಕಾಲೇಜು ಸಿಬ್ಬಂದಿ ಜತೆ ಸಭೆ ನಡೆಸಿದರಲ್ಲದೆ, ಬೋರ್ಡ್ ರೂಂನಿಂದಲೇ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕೋವಿಡ್ ವಾರ್ಡ್ಗಳನ್ನು ವೀಕ್ಷಿಸಿ ಅಲ್ಲಿನ ಅಚ್ಚುಕಟ್ಟುತನಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಪದೇ ಪದೇ ಮನವಿ ಮಾಡಿದರೂ ತಮ್ಮಲ್ಲಿರುವ ಅರ್ಧದಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಲು ಮೀನಾಮೇಷ ಎಣಿಸುತ್ತಿರುವ ಕೆಲ ಖಾಸಗಿ ಆಸ್ಪತ್ರೆಗಳ ನಡುವೆಯೇ ನಾವು ಕೇಳುವುದಕ್ಕೆ ಮುನ್ನವೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ, ಹಾಸಿಗೆಗಳನ್ನು ನೀಡಲು ಮುಂದೆ ಬಂದಿರುವ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಬದ್ಧತೆ ಮತ್ತು ಸೇವಾ ತತ್ಪರತೆಯನ್ನು ಮುಕ್ತಮನಸ್ಸಿನಿಂದ ಮೆಚ್ಚಲೇಬೇಕು ಎಂದು ಡಿಸಿಎಂ ಇದೇ ವೇಳೆ ಹೇಳಿದರು.

ಸದ್ಯಕ್ಕೆ 340 ಹಾಸಿಗೆಗಳು ಕೋವಿಡ್ ಸೋಂಕಿತರಿಗೆ ಸಿದ್ಧವಾಗಿ ಬಳಕೆಯಾಗುತ್ತಿವೆ. ಇನ್ನೆರಡು ವಾರದಲ್ಲಿ ಮತ್ತೆ 160 ಹಾಸಿಗೆಗಳು ಲಭ್ಯವಾಗುತ್ತವೆ ಎಂದು ಶ್ರೀನಿವಾಸಮೂರ್ತಿ ಅವರು ಉಪ ಮುಖ್ಯಮಂತ್ರಿ ಗಮನಕ್ಕೆ ತಂದರು. ಸದ್ಯಕ್ಕೆ ಆಸ್ಪತ್ರೆಯಲ್ಲಿ ಐದು ವೆಂಟಿಲೇಟರುಗಳಿವೆ.ಅವುಗಳ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸಬೇಕು. 50 ಐಸಿಯು ಬೆಡ್ ಗಳನ್ನು ಕನಿಷ್ಠ 100 ರಿಂದ 150 ಮಾಡಬೇಕು ಎನ್ನುವ ಡಿಸಿಎಂ ಅವರ ಮನವಿಗೆ ಸ್ಪಂದಿಸಿದರು. ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್ ಕಾರಣಕ್ಕೆ ಕೊರತೆ ಇರುವ 10 ವೆಂಟಿಲೇಟರ್ ಮತ್ತು 10 ಡಯಾಲಿಸಿಸ್ ಯಂತ್ರಗಳನ್ನು ದಾನಿಗಳಿಂದ ಕೊಡಿಸುವುದಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಭರವಸೆ ನೀಡಿದರು.

ಕೋವಿಡ್ ಸೋಂಕಿತರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ’ರೆಮ್ಯುನಸ್ ಫಿಯರ್ ಎಂಬ ಚುಚ್ಚುಮ ದ್ದಿನ ಕೊರತೆ ಇದ್ದು,ಅದನ್ನು ಸರಕಾರ ಪೂರೈಸಬೇಕು ಎಂದು ಆಸ್ಪತ್ರೆ ಆಡಳಿತ ವರ್ಗ ಮನವಿ ಮಾಡಿತು.ಇದಕ್ಕೂ ಸ್ಪಂದಿಸಿದ ಡಿಸಿಎಂ, ಅಗತ್ಯವಿರುವಷ್ಟು ಚುಚ್ಚುಮದ್ದು, ಮತ್ತಿತರೆ ಎಲ್ಲ ಔಷಧಗಳನ್ನು ಕೂಡಲೇ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಸಿಬ್ಬಂದಿಯ ಪೈಕಿ ಶೇ.10ರಷ್ಟು ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲುತ್ತಿದೆ. ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಚಿಕಿತ್ಸೆ ವೇಳೆ ಸೋಂಕು ತಗುಲುತ್ತಿದೆ. ಆದರೂ ನಮ್ಮ ಸಿಬ್ಬಂದಿ ಛಲದಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈಗ ಆಸ್ಪತ್ರೆಯ ಲ್ಲಿ ವೈದ್ಯರು, ಅರೆ ವ್ಯದ್ಯಕೀಯ ಸಿಬ್ಬಂದಿ ಕೊರತೆ ಇದೆ ಎಂದು ಆಡಳಿತ ಮಂಡಳಿ ಸಚಿವರ ಗಮನಕ್ಕೆ ತಂದಿದೆ.ಕೆ.ಸಿ.ಜನರಲ್ ಆಸ್ಪತ್ರೆಗೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ನೆರವು ಒದಗಿಸಬೇಕೆನ್ನುವ ಡಿಸಿಎಂ ಅವರ ಮನವಿಗೂ ಸ್ಪಂದಿಸುವ ಭರವಸೆ ನೀಡಿದರು.

SCROLL FOR NEXT