ಸಂಗ್ರಹ ಚಿತ್ರ 
ರಾಜ್ಯ

ಅಪರೂಪದ ಪ್ರಕರಣದಲ್ಲಿ ಪೋಕ್ಸೋ ಕಾಯ್ದೆಯಡಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್

ಅಪರೂಪದ ಪ್ರಕರಣವೊಂದರಲ್ಲಿ ಅಪ್ರಾಪ್ತೆಯರ ರಕ್ಷಣೆಗೆಂದು ರಚಿಸಲಾಗಿರುವ ಪೋಕ್ಸೋ ಕಾಯ್ದೆಯ ಆರೋಪಿಯೋರ್ವನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 

ಬೆಂಗಳೂರು: ಅಪರೂಪದ ಪ್ರಕರಣವೊಂದರಲ್ಲಿ ಅಪ್ರಾಪ್ತೆಯರ ರಕ್ಷಣೆಗೆಂದು ರಚಿಸಲಾಗಿರುವ ಪೋಕ್ಸೋ ಕಾಯ್ದೆಯ ಆರೋಪಿಯೋರ್ವನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 

ಇದೊಂದು ಅತ್ಯಂತ ಅಪರೂಪದ ಪ್ರಕರಣವಾಗಿದ್ದು, ಇದೇ ಮೊದಲ ಬಾರಿಗೆ ಪೋಕ್ಸೋ ಕಾಯ್ದೆಯಡಿ ಆರೋಪಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ. ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಶಿಕ್ಷಕನೋರ್ವನಿಗೆ ಹೈಕೋರ್ಟ್ ನ್ಯಾಯಮೂರ್ತಿ ಮೈಕೆಲ್‌ ಡಿ. ಕುನ್ಹಾ ಅವರಿದ್ದ ಏಕಸದಸ್ಯ ಪೀಠ ನಿರೀಕ್ಷಣಾ ಜಾಮೀನು ನೀಡಿದೆ. 

ಅರ್ಜಿದಾರರು ಶಾಲಾ ಶಿಕ್ಷಕರಾಗಿದ್ದು, ಶಾಲಾ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಈ ಸಂಬಂಧ ಓರ್ವ ವಿದ್ಯಾರ್ಥಿನಿಯ ತಾಯಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

ಆರೋಪಿ ಪರವಾಗಿ ವಕೀಲರಾದ ಕಾರ್ತಿಕ್‌ ವಿ ಮತ್ತು ಪ್ರಿನ್ಸ್‌ ಐಸಾಕ್ ವಾದ ಮಂಡಿಸಿದ್ದರು. ಜಾಮೀನು ಕೊಡಿಸಿದ ವಿಳಂಬ ತನಿಖೆ ವಿಚಾರಣೆ ವೇಳೆ ಸರ್ಕಾರಿ ವಕೀಲರು, ಪೋಕ್ಸೋ ಕಾಯ್ದೆ ಅಪ್ರಾಪ್ತರ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯಲು ಜಾರಿಗೊಳಿಸಲಾಗಿದ್ದು, ಇದರಡಿಯಲ್ಲಿ ಆರೋಪಿಗಳ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಲಬಹುದು. ಈ ಕಾಯ್ದೆಯ ಸೆಕ್ಷನ್‌ 438 ಅಡಿಯಲ್ಲಿ ಯಾವುದೇ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ವಾದಿಸಿದರು. 

ಆದರೆ, ಇದನ್ನು ಒಪ್ಪದ ನ್ಯಾಯಪೀಠ, ಪೋಕ್ಸೋ ಕಾಯ್ದೆಯ ನಿಯಮಗಳ ಅನುಸಾರ ದೂರು ದಾಖಲಾದ ತಕ್ಷಣ ದೂರುದಾರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕು. ಆದರೆ, ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಮೇ ತಿಂಗಳಲ್ಲಿಯೇ ದೂರು ದಾಖಲಾಗಿದ್ದರೂ, ದೂರುದಾರ ಪೋಷಕರು ಮತ್ತು ಎಫ್‌ಐಆರ್‌ ನಲ್ಲಿ ಉಲ್ಲೇಖಿಸಲಾದ ಆರು ವಿದ್ಯಾರ್ಥಿನಿಯರ ಹೇಳಿಕೆಗಳನ್ನು ಸೆಕ್ಷನ್‌ 164ರ ಅಡಿಯಲ್ಲಿ ಏಕೆ ದಾಖಲಿಸಿಕೊಂಡಿಲ್ಲ ಎಂದು ಪೊಲೀಸರನ್ನು ಪ್ರಶ್ನಿಸಿತು. 

ಇದಕ್ಕೆ ಸಮಾಧಾನಕರ ಉತ್ತರ ದೊರೆಯದ ಹಿನ್ನೆಲೆಯಲ್ಲಿ ನ್ಯಾಯಪೀಠ, ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ದೂರು ದಾಖಲಾದ ನಂತರವೂ ಶಿಕ್ಷಕ ತನ್ನ ಕರ್ತವ್ಯದಲ್ಲಿ ಮುಂದುವರಿದಿದ್ದು, ಆತನನ್ನು ಬಂಧಿಸಲು ಪೊಲೀಸರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಅವರನ್ನು ಬಂಧಿಸುವ ಅನಿವಾರ್ಯತೆಯಿಲ್ಲ. ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದರಿಂದ ತನಿಖೆಗೆ ಯಾವುದೇ ಅಡ್ಡಿಯುಂಟಾಗುವುದಿಲ್ಲ ಎಂದು ತೀರ್ಪು ನೀಡಿದೆ.

ಆರೋಪಿ ನಿರೀಕ್ಷಣಾ ಜಾಮೀನು ಪಡೆದ 15 ದಿನಗಳಲ್ಲಿ ಚಿತ್ರದುರ್ಗದ ಮಹಿಳಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಬೇಕು. ಆರೋಪಿ 1 ಲಕ್ಷ ರೂ. ಬಾಂಡ್‌ ಮತ್ತು ಎರಡು ಶ್ಯೂರಿಟಿಗಳನ್ನು ಒದಗಿಸಬೇಕು. ಮತ್ತು ತನಿಖೆಗೆ ಸಹಕರಿಸಬೇಕು ಎಂದು ತೀರ್ಪು ತಿಳಿಸಿದೆ.

ಪ್ರಕರಣವೇನು? 
ಚಿತ್ರದುರ್ಗದ ಖಾಸಗಿ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಇದ್ದಕ್ಕಿದ್ದ ಹಾಗೆ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದಳು. ಈ ಕುರಿತು ಆಕೆಯ ಪೋಷಕರು ವಿಚಾರಿಸಿದಾಗ, ಆಕೆ ತನ್ನ ಮೇಲೆ ಶಾಲೆಯ ಸಹಾಯಕ ಶಿಕ್ಷಕನೋರ್ವ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ತನಗಷ್ಟೇ ಅಲ್ಲದೆ, ಬೇರೆ ವಿದ್ಯಾರ್ಥಿಗಳಿಗೆ ಕೂಡ ಇದೇ ರೀತಿ ತೊಂದರೆ ನೀಡುತ್ತಿದ್ದಾರೆ ಎಂಬ ವಿಷಯ ತಿಳಿಸಿದ್ದಳು. 

ಪಾಠ ಮಾಡುವ ನೆಪದಲ್ಲಿ ಶಿಕ್ಷಕ ತನ್ನ ಕೆನ್ನೆ ಹಿಂಡುವುದು, ಎದೆ, ಸೊಂಟವನ್ನು ಗಿಲ್ಲುವ ಮೂಲಕ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆ ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಳು. ಈಕೆಯ ತಾಯಿ ಶಾಲೆಗೆ ಭೇಟಿ ನೀಡಿ ಆಕೆಯ ಸ್ನೇಹಿತೆಯರನ್ನು ವಿಚಾರಿಸಿದಾಗ, ಅವರು ಕೂಡ ಇದೇ ಅನುಭವ ಹಂಚಿಕೊಂಡಿದ್ದರು. ಆಕ್ರೋಶಗೊಂಡ ಪೋಷಕರು ಶಾಲೆಗೆ ಭೇಟಿಯಾಗಿ ಆಡಳಿತ ಮಂಡಳಿಗೆ ದೂರು ನೀಡಿದ್ದರು.
 
ಆದರೆ, ಶಾಲಾ ಆಡಳಿತ ಶಿಕ್ಷಕನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಆರು ವಿದ್ಯಾರ್ಥಿಗಳು ಕೂಡ ತಮಗಾದ ಕಹಿ ಅನುಭವಗಳನ್ನು ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT