ರಾಜ್ಯ

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ: ಆರೋಪಿ ವಶಕ್ಕೆ

Vishwanath S

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಂಧೂ ಬಿ. ರೂಪೇಶ್ ಅವರಿಗೆ ವಾಟ್ಸಪ್ ಗ್ರೂಪ್‌ನಲ್ಲಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮೂಡುಬಿದಿರೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಬಂಧ ಬಜ್ಪೆ ಸಮೀಪದ ನಿವಾಸಿ ರಂಜಿತ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಜಾನುವಾರು ಸಾಗಾಟಗಾರರ ಮೇಲೆ ನಡೆಸಲಾಗುತ್ತಿರುವ ಹಲ್ಲೆಗಳನ್ನು ಉಲ್ಲೇಖಿಸಿ ಕಾನೂನು ಕ್ರಮದ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೋಮವಾರ ನೀಡಿದ್ದರು. ಈ ಹೇಳಿಕೆಯ ಸುದ್ದಿಯನ್ನು ಉಲ್ಲೇಖಿಸಿ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಚರ್ಚೆ ನಡೆದಿದ್ದು, ಅದರಲ್ಲಿ ವ್ಯಕ್ತಿಯೊಬ್ಬ ನೇರವಾಗಿ ಜಿಲ್ಲಾಧಿಕಾರಿಯ ಹತ್ಯೆಯ ಬೆದರಿಕೆಯೊಡ್ಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಈ ನಡುವೆ ಸಿಂಧೂ ರೂಪೇಶ್ ಅವರನ್ನು ಮಂಗಳವಾರ ದಿಢೀರ್ ವರ್ಗಾವಣೆಗೊಳಿಸಲಾಗಿತ್ತು. ಸರ್ಕಾರದ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಿಂಧೂ ಅವರು ಅಕ್ರಮವಾಗಿ ಜಾನುವಾರ ಸಾಗಾಟ ಮಾಡುವವರು ಮತ್ತು ಅವರನ್ನು ಕಾನೂನಿನ ಹೆಸರಿನಲ್ಲಿ ತಡೆಯುವವರ ವಿರುದ್ಧವೂ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಅವರು ಜಿಲ್ಲೆಯಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಿದ್ದರು. ಆದರೆ ಸರ್ಕಾರ ಅವರನ್ನು ದಿಢೀರ್ ವರ್ಗಾಯಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

SCROLL FOR NEXT