ರಾಜ್ಯ

ಕೊರೋನಾ ವೈರಸ್: ಬೆಂಗಳೂರಿನಲ್ಲಿ ಕಂಟೈನ್ ಮೆಂಟ್ ಝೋನ್ ಗಳ ಸಂಖ್ಯೆ 36ಕ್ಕೆ ಏರಿಕೆ

Srinivasamurthy VN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಜೋರಾಗಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹೊತ್ತಿನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಂಟೈನ್ ಮೆಂಟ್ ಝೋನ್ ಗಳ ಸಂಖ್ಯೆಯನ್ನು ಬರೊಬ್ಬರಿ 36ಕ್ಕೆ ಏರಿಕೆ ಮಾಡಿದೆ.

ಶನಿವಾರವಷ್ಟೇ 26ರಷ್ಟಿದ್ದ ಕಂಟೈನ್ ಮೆಂಟ್ ಝೋನ್ ಗಳ ಸಂಖ್ಯೆ ಕೇವಲ 24 ಗಂಟೆಗಳ ಅವಧಿಯಲ್ಲಿ 36ಕ್ಕೆ ಏರಿಕೆಯಾಗಿದೆ. ಪ್ರಮುಖವಾಗಿ ಭಾನುವಾರ ಈ ಸಂಖ್ಯೆಯನ್ನು ಬಿಬಿಎಂಪಿ 32ಕ್ಕೆ ಏರಿಕೆ ಮಾಡಿತ್ತು. ಆದರೆ ಸೋಮವಾರ ಸಂಜೆ ವೇಳೆಗೆ ಪಟ್ಟಿಯನ್ನು ಮತ್ತೆ ಪರಿಷ್ಕರಿಸಿ ಈ ಸಂಖ್ಯೆಯನ್ನು 36ಕ್ಕೆ  ಏರಿಕೆ ಮಾಡಿದೆ. ಕಂಟೈನ್ ಮೆಂಟ್ ಝೋನ್ ಗಳ ಪಟ್ಟಿಗೆ ಹೊಸದಾಗಿ 10 ವಾರ್ಡ್ ಗಳನ್ನು ಸೇರಿಸಲಾಗಿದ್ದು, ಸಿದ್ದಾಪುರ, ಹೊಸಹಳ್ಳಿ, ಬೊಮ್ಮನಹಳ್ಳಿ, ಎಚ್‌ಎಸ್‌ಆರ್ ಲೇಔಟ್, ಅಗರ, ಕಾಡುಗೋಡಿ, ಚೊಕ್ಕಸಂದ್ರ, ಚೋಳರೆಡ್ಡಿಪಾಳ್ಯ, ಜಯಮಹಲ್ ಮತ್ತು ಕೆಂಪೇಗೌಡ ನಗರ ವಾರ್ಡ್ ಗಳನ್ನು ಸೇರಿಸಲಾಗಿದೆ.

ನಗರದಲ್ಲಿ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆಯೇ ಈ ಕಂಟೈನ್ ಮೆಂಟ್ ಝೋನ್ ಗಳ ಹೆಚ್ಚಾಗಲು ಕಾರಣ ಎಂದು ಹೇಳಲಾಗುತ್ತಿದ್ದು, ಅನ್ ಲಾಕ್ 1.0 ಅವಧಿಯಲ್ಲಿ ಕಂಟೈನ್ ಮೆಂಟ್ ಝೋನ್ ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಆರಂಭವಾಗಿದೆ. ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಆಯುಕ್ತು ಬಿಎಚ್  ಅನಿಲ್ ಕುಮಾರ್ ಅವರು ಮುಂಬೈ ಮತ್ತು ಮಹಾರಾಷ್ಟ್ರದಿಂದ ಆಗಮಿಸುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಅವರ ಸಂಪರ್ಕಕ್ಕೆ ಬಂದವರಿಗೂ ಸೋಂಕು ತಗಲುತ್ತಿದ್ದು, ಇದರಿಂದಾಗಿ ನಗರದಲ್ಲಿ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. 

ಕಂಟೈನ್ ಮೆಂಟ್ ಝೋನ್ ಗೆ ಹೊಸದಾಗಿ ಸೇರ್ಪಡೆಗೊಂಡಿರುವ ವಾರ್ಡ್ ಗಳು ಜೂನ್ 27ರವರೆಗೂ ಕಂಟೈನ್ ಮೆಂಟ್ ಝೋನ್ ಆಗಿಯೇ ಇರಲಿದೆ. ಬಳಿಕ ಇಲ್ಲಿನ ಸ್ಥಿತಿಗತಿ ನೋಡಿಕೊಂಡು ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಹಾಲಿ ಕಂಟೈನ್ ಮೆಂಟ್ ಝೋನ್ ಗಳಾದ ಎಸ್.ಕೆ ಗಾರ್ಡನ್, ಪಾದರಾಯನಪುರ, ಹೊಂಗಸಂದ್ರ, ಶಿವಾಜಿನಗರ, ಮಲ್ಲೇಶ್ವರಂ ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದೇ ಕಾರಣಕ್ಕೆ ಈ ವಾರ್ಡ್ ಗಳು ಸತತವಾಗಿ ಪಟ್ಟಿಯಲ್ಲಿವೆ ಎಂದು ಹೇಳಿದರು.

SCROLL FOR NEXT