ರಾಜ್ಯ

ಪಾದರಾಯನಪುರ ಗಲಾಟೆ ಪ್ರಕರಣ: ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ

Manjula VN

ಬೆಂಗಳೂರು: ಪಾದರಾಯನಪುರದಲ್ಲಿ ಕೊರೋನಾ ನಿಯಂತ್ರಣ ಕರ್ತವ್ಯದಲ್ಲಿದ್ದ ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣ 126 ಆರೋಪಿಗಳ ವಿರುದ್ಧ ಜೆ.ಜೆ.ನಗರ ಠಾಣಾ ಪೊಲೀಸರು ದಾಖಲಿಸಿರುವ ಪ್ರತ್ಯೇಕ ನಾಲ್ಕು ಎಫ್ಐಆರ್ ಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ. 

ವಜೀರ್ ಖಾನ್ ಸೇರಿದಂತೆ ಪ್ರಕಱಣದ 126 ಆರೋಪಿಗಳು ತಮ್ಮ ವಿರುದ್ಧ ಎಫ್ಐಆರ್ ಗಳನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ನಾಲ್ಕು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಈ ಆದೇಶ ನೀಡಿದ್ದಾರೆ. 

ಒಂದೇ ಕೃತ್ಯ ಸಂಬಂಧ 2ನೇ ಎಫ್ಐಆರ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಈ ಪ್ರಕರಣದಲ್ಲಿ ಪೊಲೀಸರು ತಮ್ಮ ವಿರುದ್ಧ ಒಂದೇ ಕೃತ್ಯಕ್ಕೆ ನಾಲ್ಕು ಎಫ್ಐಆರ್ ಗಳನ್ನು ದಾಖಲಿಸಿದ್ದಾರೆ. ಹೀಗಾಗಿ ಎಫ್ಐಆರ್ ಗಳನ್ನು ರದ್ದುಪಡಿಸಬೇಕು ಹಾಗೂ ಆ ಕುರಿತ ಕಾನೂನು ಪ್ರಕ್ರಿಯೆಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಅರ್ಜಿದಾರರು ಕೋರಿದ್ದರು. 

ಈ ವಾದವನ್ನು ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕರಾದ ವಿ.ಎಂ.ಶೀಲವಂತ್ ಅವರು, ಅರ್ಜಿದಾರರ ವಿರುದ್ಧ ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.ನಾಲ್ಕು ಸ್ಥಳ, ಬೇರೆ ಬೇರೆ ಸಮಯದಲ್ಲಿ ಸಂಭವಿಸಿದ ಘಟನೆಗಳ ಕುರಿತು ನಾಲ್ವರು ದಾಖಲಿಸಿದ ಪ್ರತ್ಯೇಕ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಹೀಗಾಗಿ ಒಂದೇ ಕೃತ್ಯಕ್ಕೆ 2 ಎಫ್ಐಆರ್ ದಾಖಲಿಸಿಲ್ಲ ಎಂದು ವಾದಿಸಿದರು. 

ಈ ವಾದವನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರ ವಿರುದ್ಧ ಎಫ್ಐಆರ್ ಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿ ವಿಚಾರಣೆ ಮುಂದೂಡಿದೆ. 

SCROLL FOR NEXT