ರಾಜ್ಯ

ಕೊರೋನಾ ಭೀತಿಯಿಂದ ಸಾರ್ವಜನಿಕ ಭೇಟಿಗೆ ನಿರ್ಬಂಧ ಹೇರಿದ್ದ ಬಿಡಿಎ ಕಚೇರಿ ಜೂ.8ರಿಂದ ಪ್ರವೇಶಕ್ಕೆ ಮುಕ್ತ

Sumana Upadhyaya

ಬೆಂಗಳೂರು: ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಚೇರಿಗೆ ನಾಡಿದ್ದು ಸೋಮವಾರದಿಂದ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಿಡಿಎ ಕಾರ್ಯಪಡೆಗೆ ಸಂಬಂಧಪಟ್ಟ ಕಾನ್ಸ್ಟೇಬಲ್ ಗೆ ಕಳೆದ ವಾರ ಕೊರೋನಾ ಪಾಸಿಟಿವ್ ಬಂದ ಮೇಲೆ ಸುರಕ್ಷತೆ ಕ್ರಮವಾಗಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು.

ನಿನ್ನೆ ಕಾನ್ಸ್ಟೇಬಲ್ ರ ಎರಡನೇ ಬಾರಿ ಮಾಡಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಬಿಡಿಎಯ ಮೂರು ಮಂದಿ ಇತರ ಪೊಲೀಸರು ಹೋಂ ಕ್ವಾರಂಟೈನ್ ನಲ್ಲಿದ್ದಾರೆ.

ಬಿಡಿಎಯೊಳಗೆ ಕಾರ್ಯಪಡೆಯನ್ನು ರಚಿಸಿ ಅದಕ್ಕೆ ರಾಜ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸೂಪರಿಂಟೆಂಡೆಂಟ್ ನೇತೃತ್ವದಲ್ಲಿ ಪ್ರಸ್ತುತ 20 ಮಂದಿ ಪೊಲೀಸರಿದ್ದಾರೆ. ಕಟ್ಟಡ ಯೋಜನೆ, ಫ್ಲಾಟ್ ಗಳ ಖರೀದಿ, ಸೈಟ್ ಮತ್ತು ದಾಖಲೆಗಳ ಪ್ರತಿಗೆ ಸಾರ್ವಜನಿಕರು ಹೆಚ್ಚಾಗಿ ಹೋಗುವ ಸರ್ಕಾರಿ ಕಚೇರಿ ಬಿಡಿಎಯಾಗಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾತನಾಡಿದ ಕಾರ್ಯಪಡೆಯ ಸೂಪರಿಂಟೆಂಡೆಂಟ್ ಶಿವಕುಮಾರ್ ಗುನಾರೆ, ಕಾನ್ಸ್ಟೇಬಲ್ ನ್ನು ಪಾದರಾಯನಪುರದಲ್ಲಿ 10 ದಿನಗಳ ಕಾಲ ಬಂದೋಬಸ್ತ್ ಗೆ ಕಳುಹಿಸಲಾಗಿತ್ತು. ಅಲ್ಲಿ ಡ್ಯೂಟಿ ಮುಗಿಸಿ ಮೇ 28ರಂದು ನಮ್ಮ ಕಚೇರಿಗೆ ಬಂದರು. ಇಲ್ಲಿ ಒಂದು ದಿನ ಸಂಪೂರ್ಣ ಕಚೇರಿಯೊಳಗೆ ಕೆಲಸ ಮಾಡಿದ್ದರು. ಪಾದರಾಯನಪುರದಲ್ಲಿ ಅವರ ಜೊತೆ ಕೆಲಸ ಮಾಡುತ್ತಿದ್ದ ಪೊಲೀಸ್ ಗೆ ಕೊರೋನಾ ತಗಲಿದ ವಿಷಯ ತಿಳಿದು ಇವರು ಕೂಡ ಪರೀಕ್ಷೆಗೆ ಹೋದರು. ಅಲ್ಲಿ ಪಾಸಿಟಿವ್ ಎಂದು ವರದಿ ಬಂದಿತು. ಆದರೆ ನಿನ್ನೆ ಬಂದ ವರದಿಯಲ್ಲಿ ನೆಗೆಟಿವ್ ಬಂದಿದ್ದರಿಂದ ಮೊದಲ ವರದಿ ತಪ್ಪಾಗಿರಬೇಕು ಎನ್ನುತ್ತಾರೆ,.

ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ಮಂಗಳವಾರದಿಂದ ಸಾರ್ವಜನಿಕ ಪ್ರವೇಶಕ್ಕೆ ಬಿಡುತ್ತಿರಲಿಲ್ಲ.ಅವರನ್ನು ಸಹ ಒಂದು ವಾರ ಮನೆಯಲ್ಲಿರುವಂತೆ ಹೇಳಿದ್ದೇನೆ ಎಂದರು.

ಬಿಡಿಎಯ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಎಲ್ ಪಿ, ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು ಸೋಮವಾರದಿಂದ ಪ್ರವೇಶ ಮುಕ್ತಗೊಳಿಸುತ್ತೇವೆ ಎಂದರು.

SCROLL FOR NEXT