ರಾಜ್ಯ

ರಾಜ್ಯದಾದ್ಯಂತ ನಾಳೆ ದೇಗುಲಗಳು ಓಪನ್: ಭಕ್ತರ ಸ್ವಾಗತಕ್ಕೆ ಸಿದ್ಧತೆ

Manjula VN

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್'ಡೌನ್ ಘೋಷಣೆ ಮಾಡಿರುವುದರಿಂದ ಕಳೆದ 2 ತಿಂಗಳಿನಂದ ಮಠ, ಮಂದಿರಗಳಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಆದರೆ, ಇದೀಗ ಸರ್ಕಾರದ ಆದೇಶದಂತೆ ಮರಳಿ ದೇವಾಲಯಗಳನ್ನು ಜೂ.8ರಿಂದ ತೆರೆಯಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 

ಈಗಾಗಲೇ ದೇವಸ್ಥಾನ ಸ್ವಚ್ಛತೆ. ಸ್ಯಾನಿಟೈಸರ್, ಸಿಂಪಡಣೆ, ಭಕ್ತರು ಸಾಮಾಜಿಕ ಅಂತರದಲ್ಲಿ ಪ್ರವೇಶಿಸಲು ಬಾಕ್ಸ್ ಗಳ ನಿರ್ಮಾಣ, ಬ್ಯಾರಿಕೇಡ್ ಅಳವಡಿಕೆ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನು ದೇವಾಲಯಗಳು ಮಾಡಿಕೊಳ್ಳುತ್ತಿವೆ. 

ದೇವಾಲಯಕ್ಕೆ ಬರುವ ಭಕ್ತರು ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕಿದ್ದು, ಕೆಲವು ಕಡೆ ದೇವಸ್ಥಾನದ ಸಿಬ್ಬಂದಿಗೆ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. 

ಮೈಸೂರಿನ ಚಾಮುಂಡೇಶ್ವರಿ ದೇವಾಲಯವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ದೇವಾಲಯ ಮುಖ್ಯಸ್ಥರಾದ ಡಾ.ಶಶಿಶೇಖರ್ ದೀಕ್ಷಿತ್ ಮಾತನಾಡಿ, ಸರ್ಕಾರ ಹಾಗೂ ಜಿಲ್ಲಾಡಳಿತ ಮಂಡಳಿಯ ಮಾರ್ಗಸೂಚಿಯನ್ವಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಒಂದು ಬಾರಿ ದೇವಾಲಯಕ್ಕೆ ಕೇವಲ 20 ಭಕ್ತರಿಗಷ್ಟೇ ಅವಕಾಶ ಕಲ್ಪಿಸಲಾಗುತ್ತದೆ. ದೇವಾಲಯದಲ್ಲಿ ವಿಶೇಷ ಪೂಜೆಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. 

ಈ ನಡುವೆ ದೇವಾಲಯದ ಆಡಳಿತ ಮಂಡಳಿಯ ಅಧಿಕಾರಿಗಳು, 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ದೇವಾಲಯ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದಿದ್ದಾರೆ. 

ನಂಜನಗೂಡು ದೇವಾಲಯದ ಆಡಳಿತ ಮಂಡಳಿಯ ಅಧಿಕಾರಿಗಳು ಮಾತನಾಡಿ, ದೇವಾಲಯದಲ್ಲಿ ಕಾರ್ಯನಿರ್ವಹಿಸುವ ಅರ್ಚಕರು ಹಾಗೂ ಸಿಬ್ಬಂದಿಗಳಿಗೆ ಜ್ವರನ್ನು ಪರಿಶೀಲನೆ ಮಾಡಲಾಗುತ್ತದೆ. ತಾಲೂಕು ಆರೋಗ್ಯಾಧಿಕಾರಿಗಳು ಈಗಾಗಲೇ 250 ಸಿಬ್ಬಂದಿಗಳು ಹಾಗೂ ಅರ್ಚಕರನ್ನು ಪರಿಶೀಲನೆ ನಡೆಸಿದ್ದಾರೆಂದು ತಿಳಿಸಿದ್ದಾರೆ. 

SCROLL FOR NEXT