ರಾಜ್ಯ

ಜನಸೇವಕ ವ್ಯಾಪ್ತಿಗೆ ಆಧಾರ್, ಎಪಿಎಲ್, ವೋಟರ್ ಐಡಿ ನೋಂದಣಿ: ಸುರೇಶ್ ಕುಮಾರ್

Lingaraj Badiger

ಬೆಂಗಳೂರು: ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ ಮತ್ತು ಮತದಾರ ಯಾದಿಗೆ ಹೆಸರು, ನೋಂದಣಿ ಸೇವೆಗಳನ್ನು ಸಕಾಲ ಸ್ಕೀಂನ ಜನಸೇವಕ ಯೋಜನೆಯಡಿ ಒದಗಿಸಲು ಸಂಬಂಧಿಸಿದ ಇಲಾಖೆಗಳು ಸಹಮತ ವ್ಯಕ್ತಪಡಿಸಿದ್ದು, ಇಷ್ಟರಲ್ಲಿಯೇ ಈ ಸೇವೆಗಳನ್ನು ಜನಸೇವಕ ವ್ಯಾಪ್ತಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ತಾತ್ಕಾಲಿಕ ಸ್ಥಗಿತವಾಗಿದ್ದ ನಾಗರೀಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ಜನಸೇವಕ ಯೋಜನೆಯನ್ನು ಪುನರಾರಂಭಗೊಳಿಸುವ ನಿಟ್ಟಿನಲ್ಲಿ ವಿಧಾನಸೌಧದದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಹಾಗೂ ಬೆಂಗಳೂರಿನ ಸಂಬಂಧಿಸಿದ ವಿಧಾನಸಭಾ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಈ ಯೋಜನೆಯನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂದರು.

ಪ್ರಸ್ತುತ ಜನಸೇವಕ ಯೋಜನೆ ಬೆಂಗಳೂರು ಮಹಾನಗರದ ರಾಜಾಜಿನಗರ, ಬೊಮ್ಮನಹಳ್ಳಿ, ಮಹದೇವಪುರ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜಾರಿಯಲ್ಲಿದ್ದು, ಆದಾಯ, ಜಾತಿ ಪ್ರಮಾಣ ಪತ್ರ, ಹಿರಿಯ ನಾಗರೀಕರ ಪಿಂಚಣಿ ಸೇವೆ, ಕಾರ್ಮಿಕ, ಆರೋಗ್ಯ, ಪೊಲೀಸ್ ಸೇವೆಗಳು ಸೇರಿದಂತೆ 50 ಸೇವೆಗಳನ್ನು ಒದಗಿಸಲಾಗುತಿತ್ತು. ಇನ್ನು ಮುಂದೆ ಈ ವ್ಯಾಪ್ತಿಗೆ ಸಾರ್ವಜನಿಕ ಹಿತದೃಷ್ಟಿಯಿಂದ ತೀರಾ ಅಗತ್ಯವಾಗಿರುವ ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ ಮತ್ತು ಮತದಾರ ಯಾದಿಗೆ ಹೆಸರು ನೋಂದಣಿ ಸೇವೆಗಳನ್ನು ತರಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

SCROLL FOR NEXT