ರಾಜ್ಯ

ಏಪ್ರಿಲ್, ಮೇ ತಿಂಗಳಲ್ಲಿ ಲಾಕ್ ಡೌನ್ ಪೀಡಿತ ಜನರಿಗೆ ವರದಾನವಾದ ಜಾಬ್ ಕಾರ್ಡ್ ಗಳು!

Nagaraja AB

ಉಡುಪಿ: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊರೋನಾವೈರಸ್ ಲಾಕ್ ಡೌನ್ ನಿಂದಾಗಿ ಜೀವನ ನಿರ್ವಹಣೆ ಕಷ್ಟವೆನ್ನುತ್ತಿದ್ದ ಜನರಿಗೆ ಜಾಬ್ ಕಾರ್ಡ್ ಗಳು ಮನ್ರೇಗಾ ಯೋಜನೆಯಡಿ ಕೆಲಸ ದೊರಕಿಸುವ ಮೂಲಕ ವರದಾನವಾಗಿ ಪರಿಣಮಿಸಿವೆ.

ಲಾಕ್ ಡೌನ್ ವೇಳೆಯಲ್ಲಿ ಸಲೂನ್ ಅಂಗಡಿ ಮುಚ್ಚಿದ್ದರಿಂದ ಉಡುಪಿ ಶೇಖರ್ ಸುವರ್ಣ ಎಂಬವರ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸರಳ ಜೀವನ ನಡೆಸುತ್ತಿದ್ದರೂ ಸಾಂಕ್ರಾಮಿಕ ರೋಗ ದೊಡ್ಡ ಹೊಡೆತವನ್ನೇ ನೀಡಿತ್ತು. 

ಆದಾಗ್ಯೂ, ಗ್ರಾಮ ಪಂಚಾಯತ್  ಅಭಿವೃದ್ಧಿ ಅಧಿಕಾರಿ  ಹಲ್ಕಡಿ, ಶೇಖರ್ ಸುವರ್ಣ ಅವರ ಪತ್ನಿ ಬೇಬಿಗೆ ಫೋನ್ ಮಾಡಿ ಏಪ್ರಿಲ್ 25ರಿಂದ ಮನ್ರೇಗಾ ಯೋಜನೆಯಡಿ ಕೆಲಸಕ್ಕೆ ಬರುವಂತೆ ಹೇಳಿದ್ದಾರೆ. ದಿನನಿತ್ಯ ನೀಡುವ 275 ರೂ. ಆ ಕುಟುಂಬದ ಹಸಿವನ್ನು ನೀಗಿಸಿದೆ. 

ಸೂಕ್ತ ವೇಳೆಯಲ್ಲಿ ಜಾಬ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಕೆಲಸ ಪಡೆದುಕೊಂಡಿರುವುದಾಗಿ ಕಾರ್ಕಳದ ಮಂಜು ಹೇಳುತ್ತಾರೆ. ಲಾಕ್ ಡೌನ್ ಜಾರಿಯಾದ ನಂತರ ಉಡುಪಿ ಜಿಲ್ಲೆಯಲ್ಲಿ 2070 ಜನರು  ಜಾಬ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗವಕಾಶ ಪಡೆದುಕೊಂಡಿದ್ದಾರೆ.

ಈ ಮಧ್ಯೆ ಒಟ್ಟು 71 ಸಾವಿರ ಜಾಬ್ ಕಾರ್ಡ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಸಕ್ರಿಯೆ ಜಾಬ್ ಕಾರ್ಡ್ ಗಳ ಸಂಖ್ಯೆ 25 ಸಾವಿರ ಎಂಬುದು ತಿಳಿದುಬಂದಿದೆ ಎಂದು ಸಾಮಾಜಿಕ ಕಾರ್ಯಕರ್ತ ಕೃಷ್ಣ ಉದಯವಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. 

ಲಾಕ್ ಡೌನ್ ವೇಳೆಯಲ್ಲಿ ನಗರ ಪ್ರದೇಶಗಳಿಂದ ಗ್ರಾಮಗಳಿಗೆ ಹಿಂತಿರುಗಿದ ಹಾಗೂ ಸ್ಥಳೀಯ ಕೃಷಿಕರು ಕೊಪ್ಪಳ ಜಿಲ್ಲೆಯಲ್ಲಿ ಮನ್ರೇಗಾ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪದವೀಧರರು ಹಾಗೂ ವಿದ್ಯಾರ್ಥಿಗಳು ಕೂಡಾ ಕೆಲಸ ಮಾಡುವ ಮೂಲಕ 285 ದಿನಗೂಲಿ ಪಡೆದಿದ್ದಾರೆ. ಕನಕಗಿರಿ ತಾಲೂಕಿನ ಬಡ ಇಂಜಿನಿಯರ್ ವಿದ್ಯಾರ್ಥಿ ಲಲಿತಾ ಕಸ್ತೂರಿ ನಾಯಕ್ ಕೂಡಾ ಈ ಯೋಜನೆಯಡಿ ಒಂದಿಷ್ಟು ಹಣ ಸಂಪಾದಿಸಲು ಬಯಸಿದ್ದರು.

ಕಾಲುವೆ, ಜಮೀನುಗಳಲ್ಲಿ ಬದು ನಿರ್ಮಾಣ, ಅರಣ್ಯ ಪ್ರದೇಶಗಳಲ್ಲಿ ಹೊಂಡಗಳ ನಿರ್ಮಾಣ ಮತ್ತಿತರ ಕಾಮಗಾರಿಯನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೈಗೆತ್ತಿಕೊಳ್ಳಲಾಗಿದೆ.  8 ಲಕ್ಷ ಮಾನವ ದಿನಗಳ ಕೆಲಸದ ಸೃಷ್ಟಿಯೊಂದಿಗೆ 21 ಕೋಟಿ ಭತ್ಯೆಯನ್ನು ಏಪ್ರಿಲ್ , ಮೇ ತಿಂಗಳಲ್ಲಿ ಪಾವತಿಸಲಾಗಿದೆ. ಮನ್ರೇಗಾ ಯೋಜನೆಯಲ್ಲಿ ಉತ್ತಮ ಅನುಷ್ಟಾನಗೊಂಡ ಜಿಲ್ಲೆಗಳಲ್ಲಿ ಕೊಪ್ಪಳ ಜಿಲ್ಲೆಯೂ ಒಂದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ. 

ಮತ್ತೊಂದೆಡೆ ನಗರ ಪ್ರದೇಶಗಳಿಂದ  ಗದಗ ಜಿಲ್ಲೆಯ ರೋಣ ತಾಲೂಕಿಗೆ ಹಿಂತಿರುಗಿದ ಸುಮಾರು 300 ಪದವೀಧರರು ಇದೀಗ ತಮ್ಮ ಬದುಕು ನಿರ್ವಹಣೆಗಾಗಿ ಮನ್ರೇಗಾ ಯೋಜನೆ ಮೇಲೆ ಅವಲಂಬಿತರಾಗಿದ್ದಾರೆ. ಎಂಜಿನಿಯರ್, ಶಿಕ್ಷಕರು, ಟೆಕ್ನಿಶಿಯನ್ ಮತ್ತು ಕ್ಯಾಬ್ ಡ್ರೈವರ್ ಗಳು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲಸ ಇಲ್ಲದಿರುವ ಅನೇಕ ಪದವೀಧರರು ಮನ್ರೇಗಾ ಯೋಜನೆಯಡಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.

ಅಬ್ಬಿಗೆರೆಯಲ್ಲಿ ಯಲ್ಲಿ 3100 ಜನರು ಕೆಲಸ ಮಾಡಿದ್ದಾರೆ. ಈ ಪೈಕಿ 124 ಜನರು ಪದವೀಧರರಾಗಿದ್ದಾರೆ. ಕುರುಡಗಿಯಲ್ಲಿ 590 ಕೆಲಸಗಾರರ ಪೈಕಿಯಲ್ಲಿ 74 ಜನರು ಪದವೀಧರರಾಗಿದ್ದಾರೆ. ವೃತ್ತಿಪರರು ಸೇರಿದಂತೆ ಅನೇಕ ಪದವೀಧರರು ಮನ್ರೇಗಾ ಯೋಜನೆಯಡಿ ಕೆಲಸ ಮಾಡಲು ಜಾಬ್ ಕಾರ್ಡ್ ಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ. 

SCROLL FOR NEXT