ರಾಜ್ಯ

'ಮಾನವ ಹಕ್ಕುಗಳ ಉಗ್ರ ಹೋರಾಟಗಾರ'-ಬಾಂಬೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಹೊಸಬೆಟ್ಟು ಸುರೇಶ್ ನಿಧನ

Raghavendra Adiga

ಮುಂಬೈ:  "ಮಾನವ ಹಕ್ಕುಗಳಿಗಾಗಿ ಉಗ್ರ ಹೋರಾಟಗಾರ" ಎಂದು ಖ್ಯಾತವಾಗಿದ್ದ ಬಾಂಬೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಹೊಸಬೆಟ್ಟು ಸುರೇಶ್ (90) ನಿಧನರಾಗಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸುವ ಹಲವಾರು ಆಯೋಗಗಳ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಸುರೇಶ್ 1929 ರ ಜುಲೈ 20ರಂದು ದಕ್ಷಿಣಕನ್ನಡದ ಸುರತ್ಕಲ್ ಸಮೀಪದ ಹೊಸಬೆಟ್ಟುವಿನಲ್ಲಿ ಜನಿಸಿದ್ದರು. 

ಜೂನ್ 12, 1987 ರಂದು ಬಾಂಬೆ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡ ನ್ಯಾಯಮೂರ್ತಿ ಸುರೇಶ್ ಅವರು ಜುಲೈ 19, 1991 ರಂದು ನಿವೃತ್ತರಾಗಿದ್ದರು.

ನ್ಯಾಯಮೂರ್ತಿಸುರೇಶ್ ನ್ಯಾಯಮೂರ್ತಿ ತಿವಾಟಿಯಾ ಅವರೊಡನೆ  1991ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಕಾವೇರಿ ಗಲಭೆಗಳ ತನಿಖೆಗಾಗಿನ ಸಮಿತಿಯಲ್ಲಿ ಕೆಲಸ ಮಾಡಿದ್ದರು.1992 ರ ಡಿಸೆಂಬರ್ ಮತ್ತು 1993 ರ ಜನವರಿಯಲ್ಲಿ ಬಾಂಬೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ  ಗಲಭೆಗಳ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ಸುರೇಶ್ ಮತ್ತು ಸಿರಾಜ್ ಮೆಹ್ಫುಜ್ ದೌದ್ ಅವರನ್ನು ಭಾರತೀಯ ಮಾನವ ಹಕ್ಕುಗಳ ಆಯೋಗ ನೇಮಕ ಮಾಡಿತು. ಅವರು 1993 ರ ದಿ ಪೀಪಲ್ಸ್ ವರ್ಡಿಕ್ಟ್ ಎಂಬ ವರದಿಯಲ್ಲಿ ಪೊಲೀಸ್, ಸರ್ಕಾರ ಮತ್ತು ರಾಜಕೀಯ ಮುಖಂಡರನ್ನು ದೋಷಾರೋಪಣೆ  ಮಾಡಿದ್ದರು.

2002ರ ಗುಜರಾತ್ ಗಲಭೆಗಳ ತನಿಖೆಗಾಗಿ ರಚಿಸಲಾದ ಭಾರತದ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ವಿ. ಆರ್. ಕೃಷ್ಣ ಅಯ್ಯರ್ ನೇತೃತ್ವದ ಭಾರತೀಯ ಪೀಪಲ್ಸ್ ಟ್ರಿಬ್ಯೂನಲ್ (ಐಪಿಟಿ) ಸತ್ಯ ಶೋಧನಾ ತಂಡದ ಸದಸ್ಯರೂ ಆಗಿದ್ದ ಸುರೇಶ್ ಅವರು 2,094 ಮೌಖಿಕ ಮತ್ತು ಲಿಖಿತ ಸಾಕ್ಷ್ಯಗಳನ್ನು ಸಂಗ್ರಹಿಸಿ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿದ್ದರು."ಕ್ರೈಂ ಎಗನಿಸ್ಟ್ ಹ್ಯುಮಾನಿಟಿ: ಎಂಬ ವರದಿಯಲ್ಲಿ  ಅವರ ಸಂಶೋಧನೆಗಳು ದಾಖಲಾಗಿದೆ.

ಹೊಸಬೆಟ್ಟು ಸುರೇಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ದ ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಆಂಡ್ ಸೆಕ್ಯುಲರಿಸಂ "ನಾವು ನೈಜ ಮಾನವನೊಬ್ಬನನ್ನು ನಾವಿಂದು ಕಳೆದುಕೊಂಡಿದ್ದೇವೆ. ಅವರ ಕುಟುಂಬ ಸದಸ್ಯರು ಹಾಗೂ  ಹತ್ತಿರದ ಮತ್ತು ಆತ್ಮೀಯರಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ. ನಾವೆಲ್ಲರೂ ಅವರ ಪರಂಪರೆಯನ್ನು ಮುಂದುವರಿಸಬೇಕು ಮತ್ತು ಮಾನವೀಯತೆ ಬಗೆಗಿನ ಅವರ ಉತ್ಸಾಹ ನಮಗೆ ಮಾದರಿಯಾಗಬೇಕು"  ಎಂದಿದೆ.
 

SCROLL FOR NEXT