ರಾಜ್ಯ

ತಮಿಳುನಾಡಿನಿಂದ ಬಂದು ಬೆಂಗಳೂರು ಮಾರ್ಗವಾಗಿ ಛತ್ತೀಸ್ ಗಢ ತಲುಪಿದ 26 ವಲಸೆ ಕಾರ್ಮಿಕರು

Nagaraja AB

ಬೆಂಗಳೂರು: ಐದು ಮಕ್ಕಳು ಸೇರಿದಂತೆ ಛತ್ತೀಸ್ ಗಢದ 26 ವಲಸೆ ಕಾರ್ಮಿಕರು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಯಪುರಕ್ಕೆ ತಲುಪಿದ್ದಾರೆ. ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದ ಯುವಕರನ್ನು ಬೆಂಗಳೂರಿಗೆ ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿತ್ತು. 

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿಯ ಹಳೆಯ ವಿದ್ಯಾರ್ಥಿಗಳು ಇದರ ಉಸ್ತುವಾರಿ ವಹಿಸಿಕೊಂಡಿದ್ದರು. ಈ ಹಿಂದೆ ಜೂನ್ 4 ರಂದು ಬೆಂಗಳೂರಿನಿಂದ ಮೊದಲ ತಂಡದ ವಲಸೆ ಕಾರ್ಮಿಕರಿಗಾಗಿ ವಿಮಾನದ ವ್ಯವಸ್ಥೆಯನ್ನು ಇವರೇ ಆಯೋಜಿಸಿದ್ದರು.

ಈ ಬಾರಿ ಕಡಿಮೆ ಸಂಖ್ಯೆಯ ಪ್ರಯಾಣಿಕರಿದ್ದರಿಂದ ಚಾರ್ಟೆಡ್ ವಿಮಾನ ಬುಕ್ ಮಾಡುವ ಬದಲು ಪ್ರತಿನಿತ್ಯ ರಾಯಪುರಕ್ಕೆ ಹೋಗುವ ಇಂಡಿಗೊ ವಿಮಾನವೊಂದರ ಟಿಕೆಟ್ ಖರೀದಿಸಲಾಗಿತ್ತು. ಬೆಂಗಳೂರು ಮೀಡಿಯಾ ಫೌಂಡೇಷನ್ ಸ್ಥಾಪಕ ವಿಜಯ್ ಗ್ರೋವರ್, ವಲಸೆ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಮಾಡಿದರು. 

ಚೆನ್ನೈ ಸೆಂಟ್ರಲ್ ನಿಂದ ರಾಯಪುರಕ್ಕೆ ವಿಶೇಷ ರೈಲಿನಲ್ಲಿ ಕಳುಹಿಸಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಹೆಚ್ಚಾದ ಜನ ಸಾಂದ್ರತೆಯಿಂದ ಪ್ರಯಾಣ ಸಾಧ್ಯವಾಗದೆ ವಲಸೆ ಕಾರ್ಮಿಕರೊಬ್ಬರು ಸಹಾಯ ಮಾಡುವಂತೆ ಎನ್ ಎಲ್ ಎಸ್ ಯುಐ ಹಳೆಯ ವಿದ್ಯಾರ್ಥಿ ಸಿ.ಎನ್. ನಂದಕುಮಾರ್ ಅವರನ್ನು ಕೋರಿದರು. ನಂತರ ಅವರಿಗೆ ನೆರವಾಗಲು ನಿರ್ಧರಿಸಲಾಯಿತು. ಸಂಗ್ರಹವಾದ ನಿಧಿಯಿಂದ ವಿಮಾನದ ಟಿಕೆಟ್ ಗಳನ್ನು  ಖರೀದಿಸಿದ್ದು, ಚೆನ್ನೈ ಮೂಲಕ ಖಾಸಗಿ ಬಸ್ ವೊಂದರ ಮೂಲಕ ಪ್ರವಾಸಿಗರನ್ನು ಬೆಂಗಳೂರಿಗೆ ಕರೆತರಲಾಯಿತು ಎಂದು ಗ್ರೋವರ್ ತಿಳಿಸಿದರು. 

ಯುನೈಟೆಡ್ ಸಿಖ್ಸ್ ಸ್ವಯಂ ಸೇವಾ ಸಂಸ್ಥೆ, ನಂದಕುಮಾರ್, ಆರತಿ ಚಲಪ್ಪ ಹಾಗೂ ಎನ್ ಎಲ್ ಎಸ್ ಐಯು ವಲಸೆ ಕಾರ್ಮಿಕರನ್ನು ರಾಯಪುರಕ್ಕೆ ಯಶಸ್ವಿಯಾಗಿ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಗ್ರೋವರ್ ಮೆಚ್ಚುಗೆ ವ್ಯಕ್ತಪಡಿಸಿದರು. 

SCROLL FOR NEXT