ಬೆಂಗಳೂರು: ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಾರಿನ ಬ್ಯಾನೆಟ್ ಮೇಲೆ ಕ್ಯಾಬ್ ಚಾಲಕನೋರ್ವನನ್ನು ಕಿಡಿಗೇಡಿಗಳು ಶರವೇಗದಲ್ಲಿ ಹೊತ್ತೊಯ್ದಿರುವ ಭಯಾನಕ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದ ಸೋಮವಾರ ರಾತ್ರಿ 7.30ರ ಸುಮಾರಿಗೆ ಶಂಕರ ಮಠ ರಸ್ತೆಯ ಬಂಕ್ ಗೆ ಡೀಸೆಲ್ ಹಾಕಿಸಲು ಶಂಕರೇಗೌಡ ಎಂಬುವವರು ಬಂದಿದ್ದರು. ಈ ವೇಳೆ ಸ್ವಲ್ಪ ಹೊತ್ತಿನ ನಂತರ ಹಿಂದಿನಿಂದ ಮೂವರು ಸ್ವಿಫ್ಟ್ ಕಾರ್ನಲ್ಲಿ ಡೀಸೆಲ್ ಹಾಕಿಸಲು ಬಂದಿದ್ದರು. ಈ ಸಂದರ್ಭದಲ್ಲಿ ಶಂಕರೇಗೌಡರಿಗೆ ಚಿಲ್ಲರೆ ಕೊಡಲು ತಡವಾಗಿದೆ. ಇದನ್ನೇ ನೆಪಮಾಡಿಕೊಂಡ ಅವರು ಒಂದೇ ಸಮನೆ ಹಾರ್ನ್ ಮಾಡಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಬಂಕ್ ಸಿಬ್ಬಂದಿ ಕಾರು ತೆಗೆದು, ಹಾರ್ನ್ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ಇದೇ ವಿಚಾರವಾಗಿ ಕ್ಯಾಬ್ ಚಾಲಕನೊಂದಿಗೆ ಯುವತಕರು ಮಾತಿಗೆ ಮಾತು ಬೆಳೆಸಿ ಗಲಾಟೆ ಮಾಡಿದ್ದಾರೆ.
ನಂತರ ಕ್ಯಾಬ್ ಚಾಲಕ ತಮ್ಮ ಮೊಬೈಲ್ ನಲ್ಲಿ ಸ್ವಿಫ್ಟ್ ಕಾರಿನ ಫೋಟೊ ತೆಗೆಯಲು ಪ್ರಯತ್ನಿದಾಗ ಯುವಕರು ಕಾರನ್ನು ಚಲಾಯಿಸಿಕೊಂಡು ಅವರ ಮೇಲೆ ಬಂದಿದ್ದಾರೆ. ಗಾಬರಿಗೊಂಡ ಚಾಲಕ ಕ್ಯಾಬ್ ನ ಬ್ಯಾನೆಟ್ ಮೇಲೆ ನೆಗೆದಿದ್ದಾರೆ.
ಈ ಸಂದರ್ಭದಲ್ಲಿ ವೇಗವಾಗಿ ಕಾರು ಚಲಾಯಿಸಿದ ದುಷ್ಕರ್ಮಿಗಳು ಯರ್ರಾ ಬಿರ್ರಿ ರಸ್ತೆಗಳಲ್ಲಿ ಕಾರು ನುಗ್ಗಿಸಿ ಹೊರಟಿದ್ದಾರೆ. ಕಾರು ಬಸವೇಶ್ವರ ನಗರ ರಸ್ತೆಯಲ್ಲಿ ಹೋಗುತ್ತಿದ್ದಾಗ ಚಾಲಕ ಶಂಕರೇಗೌಡ ಅವರು ಸಹಾಯ ಕೋರಿ ಜೋರಾಗಿ ಕಿರುಚಿಕೊಂಡಿದ್ದಾರೆ.
ಈ ವೇಳೆ ರಸ್ತೆ ಅಕ್ಕಪಕ್ಕದಲ್ಲಿದ್ದ ಸ್ಥಳೀಯರು ಇದೊಂದು ಚಲನಚಿತ್ರ ಶೂಟಿಂಗ್ ಇರಬಹುದು ಎಂದು ಭಾವಿಸಿದ್ದರಂತೆ. ಆದರೆ, ಶಂಕರೇಗೌಡರ ಕಿರುಚಾಟ ಗಮನಿಸಿದ ಕೆಲವರು ಕಾರು ಅಡ್ಡಗಟ್ಟಲು ಮುಂದಾಗಿದ್ದಾರೆ. ನಂತರ ಜನ ಸೇರುತ್ತಿದ್ದಂತೆ ಯುವಕರು ನಿಧಾನವಾಗಿ ಕಾರು ಚಾಲನೆ ಮಾಡಿದ್ದು, ತಕ್ಷಣವೇ ಶಂಕರೇಗೌಡ ಅವರು ಬ್ಯಾನೆಟ್ ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.
ನಂತರ ಸ್ಥಳೀಯರ ಸಹಾಯದಿಂದ ಚಾಲಕ ಶಂಕರೇಗೌಡ ಅವರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ಪರಿಶೀಲನೆ ನಡೆಸಿ, ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ