ರಾಜ್ಯ

ಹುಬ್ಬಳ್ಳಿ: ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳದ ನಡುವೆ ಕೋವಿಡ್-19 ಟೆಸ್ಟ್ ಕಡಿತಗೊಳಿಸಿದ ಜಿಲ್ಲಾಡಳಿತ?

Srinivasamurthy VN

ಹುಬ್ಬಳ್ಳಿ: ಕರ್ನಾಟಕದ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಜಿಲ್ಲಾಡಳಿತ ಕೋವಿಡ್-19 ಟೆಸ್ಟ್ ಪ್ರಮಾಣವನ್ನು ಕಡಿತಗೊಳಿಸಿತೇ..?

ಇಂತಹುದೊಂದು ಪ್ರಶ್ನೆಗೆ ಕಾರಣವಾಗಿದ್ದು, ಕೋವಿಡ್-19 ಟೆಸ್ಟಿಂಗ್ ಸಂಖ್ಯೆಗಳಲ್ಲಿನ ದಿಢೀರ್ ಕುಸಿತ.. ಹೌದು..ಈ ಹಿಂದಿನ ಪರೀಕ್ಷಾ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಕಳೆದ ಐದು ದಿನಗಳಿಂದ ಹುಬ್ಬಳ್ಳಿಯಲ್ಲಿ ನಡೆಸಲಾದ ಕೊರೋನಾ ಟೆಸ್ಟ್ ಗಳ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಕಳೆದ ಐದು ದಿನಗಳಲ್ಲಿ 2 ಸಾವು ಮತ್ತು 91 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಜಿಲ್ಲೆಯಲ್ಲಿನ ಒಟ್ಟಾರೆ ಕೊರೋನಾ ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ.

ಜೂನ್ 14ರವರೆಗೂ ಜಿಲ್ಲೆಯಲ್ಲಿ ಒಟ್ಟಾರೆ 21,122 ಕೊರೋನಾ ಟೆಸ್ಟ್ ಮಾಡಲಾಗಿತ್ತು. ಅಂತೆಯೇ ಜೂನ್ 15ರಂದು ಈ ಸಂಖ್ಯೆ 21,142ರಷ್ಟಿದೆ. ಅಂದರೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಕೇವಲ 20 ಮಂದಿಯನ್ನು ಮಾತ್ರ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ. ಮೂಲಗಳ ಪ್ರಕಾರ ರೋಗಲಕ್ಷಣಗಳಿಲ್ಲದವರಿಗೆ ಸೋಂಕು ಪರೀಕ್ಷೆ ಮಾಡುವುದಕ್ಕಿಂತ SARI ಮತ್ತು ILI ರೋಗಲಕ್ಷಣಗಳಿರುವವರ ಸೋಂಕು ಪರೀಕ್ಷೆ ನಡೆಸುವಂತೆ ಅಧಿಕಾರಿಗಳು ವೈದ್ಯರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. 

ಆದರೆ ಈ ಈ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಹುಬ್ಬಳ್ಳಿಯ ಉಪ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಉತ್ತರ ನೀಡಿದ್ದು, ಅಂತಹ ಯಾವುದೇ ಸೂಚನೆಯನ್ನು ವೈದ್ಯರಿಗೆ ನೀಡಿಲ್ಲ. ಸರ್ಕಾರದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುತ್ತಿದೆ. ಜೂನ್ 16ರಿಂದ ಕೊರೋನಾ ಪರೀಕ್ಷೆಗಳ ಸಂಖ್ಯೆ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಕಂಟೈನ್ ಮೆಂಟ್ ಝೋನ್ ಅಥವಾ ಗ್ರಾಮದಲ್ಲಿರುವ ಪ್ರತೀಯೊಬ್ಬ ವ್ಯಕ್ತಿಯನ್ನೂ ಪರೀಕ್ಷೆಗೊಳಪಡಿಸಲಾಗುತ್ತಿದೆ. ಜೂನ್ 8ರಂದು ಸರ್ಕಾರ ಬಿಡುಗಡೆ ಮಾಡಿರುವ ನಿಯಮಾವಳಿ ಪ್ರಕಾರವೇ ಪರೀಕ್ಷೆ ನಡೆಸಲಾಗುತ್ತಿದೆ. ನಿಯಮಾವಳಿ ಮೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. 

SCROLL FOR NEXT