ರಾಜ್ಯ

ಜೂನ್ 20ರಿಂದ ಬಿಡಿಎ ಮೂಲೆ ನಿವೇಶನಗಳ ಇ-ಹರಾಜು

Shilpa D

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಜೂನ್ 20 ರಿಂದ ಜುಲೈ 7ರವರೆಗೆ 205 ಕಾರ್ನರ್ ಸೈಟ್ ಗಳ ಇ-ಹರಾಜು ನಡೆಯಲಿದೆ ಎಂದು ಬಿಡಿಎ ಆಯುಕ್ತ ಎಚ್ ಆರ್ ಮಹಾದೇವ್ ಹೇಳಿದ್ದಾರೆ, ಈ ಸಂಬಂಧ ಗುರುವಾರ ಅಧಿಸೂಚನೆ ಹೊರಡಿಸಲಾಗುತ್ತದೆ.

ಪ್ರಾಧಿಕಾರ ನಿರ್ಮಿಸಿರುವ ಬನಶಂಕರಿ ಲೇಔಟ್‌, ಸರ್‌ ಎಂ. ವಿಶ್ವೇಶ್ವರಯ್ಯ ಲೇಔಟ್‌, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ನಾನಾ ಬಡಾವಣೆಗಳಲ್ಲಿರುವ ಒಟ್ಟು 205 ಮೂಲೆ ನಿವೇಶನಗಳನ್ನು ಇ-ಹರಾಜು ಪಟ್ಟಿಗೆ ಸೇರಿಸಲಾಗಿದೆ. ಜೂ.20ರಿಂದ ಬಿಡ್‌ ಆರಂಭವಾಗಲಿದ್ದು, ಜು.7ರವರೆಗೆ ಕಾಲಾವಕಾಶವಿರುತ್ತದೆ.

ಜು.7ರಂದು ಬಿಡ್‌ ಆಧರಿಸಿ ಹರಾಜು ಮಾಡಲಾಗುತ್ತದೆ. ಆಯಾ ಬಡಾವಣೆವಾರು ಕಾರ್ನರ್‌ ಸೈಟ್‌ಗಳ ವಿವರಗಳನ್ನು ಪ್ರಾಧಿಕಾರದ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.

ಬಿಡಿಎ ಕಾಯಿದೆಯಲ್ಲಿ ಪ್ರಾಧಿಕಾರದ ಹಣವನ್ನು ಸರಕಾರಕ್ಕೆ ನೇರವಾಗಿ ಜಮೆ ಮಾಡಲು ಅವಕಾಶ ಇಲ್ಲ. ಹೀಗಾಗಿ ಮೂಲೆ ನಿವೇಶನಗಳಿಂದ ಬಂದಂತಹ ಹಣವನ್ನು ಸರಕಾರಕ್ಕೆ ವರ್ಗಾಯಿಸಲು ತಾಂತ್ರಿಕ ಅಡ್ಡಿ ಎದುರಾಗಿದೆ. ಮಹಾನಗರಕ್ಕೆ ಸಂಬಂಧಿಸಿದ ಮೂಲಸೌಕರ್ಯ ಯೋಜನೆಗಳನ್ನು ಪ್ರಾಧಿಕಾರಕ್ಕೆ ವಹಿಸಿ ಹರಾಜಿನ ಹಣ ಬಳಸಿಕೊಳ್ಳಲು ಅವಕಾಶ ಇದೆ. ಈ ಬಗ್ಗೆ ಸರಕಾರ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ನಾನಾ ಉದ್ಯಮಗಳು ಸೊರಗಿವೆ. ಅದರಂತೆ ರಿಯಲ್‌ ಎಸ್ಟೇಟ್‌ ಉದ್ಯಮವೂ ಕುಂಟುತ್ತಾ ಸಾಗಿದೆ. ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಸಮಯದಲ್ಲಿ ಕೋಟಿ ರೂ. ಬೆಲೆಯ ಮೂಲೆ ನಿವೇಶನಗಳು ಬಿಕರಿ ಆಗಲಿವೆಯೇ ಎಂಬ ಅನುಮಾನ ಮೂಡಿದೆ. ಹಣವಂತರು ಕೂಡ ದೊಡ್ಡ ಮೊತ್ತದ ಸೈಟ್‌ಗಳನ್ನು ಖರೀದಿಸಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಜತೆಗೆ ಸೈಟ್‌ ಖರೀದಿಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಿಗುವುದು ಕಷ್ಟ. ಲಾಕ್‌ಡೌನ್‌ನಿಂದ ಚೇತರಿಕೆಗೆ ಇನ್ನೂ 2-3 ತಿಂಗಳು ಹಿಡಿಯಲಿದೆ. ಆ ಬಳಿಕ ಹರಾಜು ಪ್ರಕ್ರಿಯೆ ಕೈಗೊಂಡಿದ್ದರೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿತ್ತು ಎಂಬ ಮಾತು ಕೇಳಿ ಬಂದಿದೆ.

SCROLL FOR NEXT