ಬೆಂಗಳೂರು: ಬೆಂಗಳೂರು ನಗರದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಕೊರೋನಾ ವಾರಿಯರ್ಸ್, ವಿಧಾನಸೌಧದ ವಾರ್ತಾ ಇಲಾಖೆ ಉಪ ನಿರ್ದೇಶಕ, ಪೊಲೀಸ್ ಸಿಬ್ಬಂದಿ, ಬಿಎಂಟಿಸಿ ಸಿಬ್ಬಂದಿ, ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸೇರಿದಂತೆ ಶನಿವಾರ ಬರೋಬ್ಬರಿ 94 ಮಂದಿಗೆ ಕೊರೋನಾ ಸೋಂಕು ದೃಢಪಡುವ ಮೂಲಕ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.
ಕಳೆದ ಎರಡು ದಿನದಲ್ಲಿ ಬೆಂಗಳೂರಿನಲ್ಲಿ 232 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಶುಕ್ರವಾರ 138 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದವು. ಮತ್ತೆ ಶನಿವಾರ 94 ಕೊರೋನಾ ಸೋಂಕು ಬೆಂಗಳೂರು ನಗರದಲ್ಲಿ ಪತ್ತೆಯಾಗಿವೆ. ಈ ಮೂಲಕ ಬೆಂಗಳೂರಿನ ಒಟ್ಟಾರೆ ಸೋಂಕಿತರ ಸಂಖ್ಯೆ 1,076ಕ್ಕೆ ಏರಿಕೆಯಾಗಿದೆ.
ಶನಿವಾರ ಮತ್ತೆ ಮೂರು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ ಒಬ್ಬರು ಪೊಲೀಸ್ ಇಲಾಖೆಯ ಸಿಬ್ಬಂದಿಯಾಗಿದ್ದಾರೆ. ಇನ್ನು ಒಬ್ಬ ರೋಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶನಿವಾರ ಪತ್ತೆಯಾದ 94 ಪ್ರಕರಣದ ಪೈಕಿ 24 ಮಂದಿಗೆ ವಿದೇಶ, ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ. ಉಳಿದ 23 ಮಂದಿ ಸೋಂಕಿತರ ಸಂರ್ಕದಿಂದ ಸೋಂಕು ದೃಢಪಟ್ಟಿದೆ.
ಕೆಮ್ಮು, ಶೀತ ಹಾಗೂ ಜ್ವರ ಸಮಸ್ಯೆಯಿಂದ 20 ಮಂದಿಗೆ, ಉಸಿರಾಟದ ಸಮಸ್ಯೆಯುಳ್ಳ 14 ಮಂದಿಗೆ ಸೋಂಕು ಪತ್ತೆಯಾದರೆ 10 ಮಂದಿಗೆ ಸೋಂಕಿನ ಮೂಲ ದೊರೆತಿಲ್ಲ. ಇನ್ನು ಮೂರು ಮಂದಿಗೆ ಕಂಟೈನ್ಮೆಂಟ್ ವಲಯಕ್ಕೆ ಭೇಟಿ ನೀಡಿದ್ದರಿಂದ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.