ರಾಜ್ಯ

ಕೊರೋನಾ ಸೋಂಕಿತರಿಗಿಲ್ಲ ಸೂಕ್ತ ಸೌಲಭ್ಯ: ರಾಜೀವ್ ಗಾಂಧಿ ಆಸ್ಪತ್ರೆ ರೋಗಿಗಳ ಆಕ್ರೋಶ

Shilpa D

ಬೆಂಗಳೂರು: ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯಗಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೋವಿಡ್ ರೋಗಿಗಳು,  ಸರಿಯಾಗಿ ಊಟ–ತಿಂಡಿ ನೀಡುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಸ್ನಾನದ ಕೊಠಡಿ ಮತ್ತು ಶೌಚಾಲಯಗಳ ಕೊರತೆಯೂ ಸೇರಿದಂತೆ ವಿವಿಧ ಸಮಸ್ಯೆಗಳಿವೆ ಎಂದು ಆರೋಪಿಸಿದ್ದಾರೆ.

ಕೋವಿಡ್ ಆಸ್ಪತ್ರೆಯಾದ ವಿಕ್ಟೋರಿಯಾದಲ್ಲಿ ಹಾಸಿಗೆಗಳ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ 85 ರೋಗಿಗಳನ್ನು ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸೋಂಕು ಕಾಣಿಸಿಕೊಂಡ ಪ್ರಾರಂಭಿಕ ದಿನಗಳಲ್ಲಿ ಕೋವಿಡ್ ರೋಗಿಗಳಿಗೆ ಅಲ್ಲಿ ಚಿಕಿತ್ಸೆ ನೀಡಿದರೂ ಬಳಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಶಂಕಿತರನ್ನು ಮಾತ್ರ  ದಾಖಲಿಸಿಕೊಳ್ಳಲಾಗುತ್ತಿತ್ತು. 

ಏಕಾಏಕಿ ಅಧಿಕ ಸಂಖ್ಯೆಯಲ್ಲಿ ರೋಗಿಗಳನ್ನು ಕಳುಹಿಸಿದ ಪರಿಣಾಮ ಆಸ್ಪತ್ರೆಯು ರೋಗಿಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ವಿಫಲವಾಗಿದೆ. ‘ಇಲ್ಲಿ ನಮ್ಮನ್ನು ಕೇಳುವವರೇ ಇಲ್ಲ. ಸಂಜೆ 6 ಗಂಟೆಗೆ ಊಟ ನೀಡಿದ ಬಳಿಕ ಮರು ದಿನ ಬೆಳಿಗ್ಗೆ 10 ಗಂಟೆಗೆ ತಿಂಡಿ ನೀಡಿದ್ದಾರೆ. ರಾತ್ರಿ ಊಟ ಇಲ್ಲದೆಯೇ ಉಪವಾಸದಿಂದ ಸಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಕೈತೊಳೆಯುವಲ್ಲಿ ಸ್ಯಾನಿಟೈಸರ್ ಹಾಗೂ ಸೋಪನ್ನು ಕೂಡ ಇಟ್ಟಿಲ್ಲ. ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಒಂದೇ ಬಕೆಟ್‌ ಅನ್ನು 20 ಮಂದಿ ಬಳಸಬೇಕಾಗಿದೆ. ಆಸ್ಪತ್ರೆಯ ಸಿಬ್ಬಂದಿ ಬಳಿ ಸಮಸ್ಯೆಗಳನ್ನು ಹೇಳಿಕೊಂಡು ಸಾಕಾಗಿದೆ. ಆರೋಗ್ಯ ಸಚಿವರು ಈ ಬಗ್ಗೆ ಗಮನಹರಿಸಬೇಕು' ಎಂದು ರೋಗಿಯೊಬ್ಬರು ಮನವಿ ಮಾಡಿಕೊಂಡಿದ್ದಾರೆ. ‘ಸಮಯಕ್ಕೆ ಸರಿಯಾಗಿ ಊಟ–ತಿಂಡಿಯನ್ನು ನೀಡುತ್ತಿಲ್ಲ. ಸ್ನಾನ ಮಾಡಲು ಬಿಸಿನೀರಿನ ವ್ಯವಸ್ಥೆಯಿಲ್ಲ. ಮುಖಗವಸುಗಳನ್ನು ಕೂಡ ನೀಡುತ್ತಿಲ್ಲ. ಕನಿಷ್ಠ ಕುಡಿಯಲು ಕೂಡ ನೀರಿಲ್ಲ. ಸೌಲಭ್ಯ ನೀಡದಿದ್ದರೆ ಸಾಮೂಹಿಕವಾಗಿ ನೇಣು ಹಾಕಿಕೊಂಡು ಸಾಯಬೇಕಾಗುತ್ತದೆ’ ಎಂದು ರೋಗಿಯೊಬ್ಬರು ಎಚ್ಚರಿಸಿದ್ದಾರೆ. 

ತೀವ್ರ ಉಸಿರಾಟದ ಸಮಸ್ಯೆ ಹಾಗೂ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿದ್ದವರನ್ನು ಮಾತ್ರ ದಾಖಲಿಸಿ ಕೊಳ್ಳುತ್ತಿದ್ದೆವು. ಸದ್ಯ 17 ಮಂದಿ  ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಈಗಾಗಲೇ ಮನವಿ ಮಾಡಿದ್ದೇವೆ. ಆಗ ಎಲ್ಲ ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡಬಹುದು. ಏಕಾಏಕಿ ಹೆಚ್ಚಿನ ರೋಗಿಗಳನ್ನು ಕಳುಹಿಸಿದ್ದರಿಂದ ಈ ಸಮಸ್ಯೆ ಎದುರಾಗಿದೆ, ಸೌಲಭ್ಯ ಒದಗಿಸುವ ಸಂಬಂಧ
ರೋಗಿಗಳ ಜತೆಗೆ ಚರ್ಚಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು  ಆಸ್ಪತ್ರೆಯ ನಿರ್ದೇಶಕ ಡಾ.ಸಿ. ನಾಗರಾಜ್ ಹೇಳಿದ್ದಾರೆ.
 

SCROLL FOR NEXT