ರಾಜ್ಯ

ವಿಶ್ವ ಯೋಗ ದಿನಾಚರಣೆ: ತ್ರಿನೇತ್ರ ಶ್ರೀಗಳಿಂದ ಜಲ ಯೋಗ ಪ್ರದರ್ಶನ

Prasad SN

ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಭಾನುವಾರ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಯೋಗ ಜಲ ಯೋಗ ಪ್ರದರ್ಶಿಸಿದರು.

ಭಾನುವಾರ ಬೆಳಿಗ್ಗೆ ಚಂದ್ರವನ ಆಶ್ರಮದ ಬಳಿ ಕಾವೇರಿ ನದಿಯಲ್ಲಿ ಸುಮಾರು ೩೦ ನಿಮಿಷ ,ವಿವಿಧ ಆಸನಗಳನ್ನು ಶ್ರೀಗಳು ಪ್ರದರ್ಶಿಸಿದರು. 

ವೀರಭದ್ರಾಸನ, ಶಿಲುಬೆ ಆಸನ, ಹನುಮಾಸನ, ಮಲೆ ಮಹದೇಶ್ವರ ಆಸನ, ನಿರ್ವಾಯು ಆಸನ, ಪದ್ಮಾಸನ, ಆಶೀರ್ವಾದಾಸನ, ಮತ್ಸ್ಯಾಸನ, ಕೂರ್ಮಾಸನ ಸೇರಿದಂತೆ ಹತ್ತಕ್ಕೂ ಹೆಚ್ಚು ಆಸನಗಳನ್ನು ಲೀಲಾಜಾಲವಾಗಿ ಮಾಡಿದರು. ನೀರಿನ ಮೇಲೆ ತೇಲುತ್ತಲೇ ವಿವಿಧ ಭಂಗಿಗಳಲ‌ಲ್ಲಿ ಯೋಗ ಪ್ರದರ್ಶಿಸಿದ್ದು ಗಮನ ಸೆಳೆಯಿತು.

ಇದೇ ವೇಳೆ ಆಶೀರ್ವಚನ ನೀಡಿದ ಶ್ರೀಗಳು ,ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ. ದಿನದಲ್ಲಿ ಒಂದು ಗತಾಸು ಯೋಗ ಮತ್ತು ಪ್ರಾಣಾಯಾಮ ಮಾಡಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಏಕಾಗ್ರತೆ ಸಿದ್ದಿಸುತ್ತದೆ. ಸಂಘ, ಸಂಸ್ಥೆಗಳು ಯೋಗದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಆಶ್ರಮದ ಆವರಣದಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ, ಪತ್ನಿ ದೇವಿಕಾ, ಪುತ್ರಿ ಮತ್ತು ಅಳಿಯ ಕೂಡ ಪಾಲ್ಗೊಂಡಿದ್ದರು. 20 ನಿಮಿಷಗಳ ಕಾಲ ಸಚಿವರು ಯೋಗ ಮಾಡಿದರು. ಬೆಳಗಾವಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ಚಾಮೀಜಿ, ಮಾಜಿ ಸಚಿವ ರುದ್ರಪ್ಪಲಮಾಣಿ ಕೂಡ ಯೋಗದಲ್ಲಿ ಭಾಗವಹಿಸಿದ್ದರು.

ಮತ್ತೊಂದೆಡೆ ಶ್ರೀರಂಗಪಟ್ಟಣದಲ್ಲಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ತಾಲ್ಲೂಕು ಆಡಳಿತ, ಕೆ.ಶೆಟ್ಟಹಳ್ಳಿ ವಿವೇಕಾನಂದ ಯೋಗ ಕಿಶೋರ ಕೇಂದ್ರ ಹಾಗೂ ಅಭಿನವ ಭಾರತ್ ತಂಡ ಭಾನುವಾರ ಏರ್ಪಡಿಸಿದ್ದ ಯೋಗ ದಿನಾಚರಣೆಯಲ್ಲಿ ತಹಶೀಲ್ದಾರ್ ಎಂ.ವಿ ರೂಪಾ, ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮಾ ಮುಂಚೂಣಿಯಲ್ಲಿ ಯೋಗ ಪ್ರದರ್ಶಿಸಿದರು. 

ಇದೇ ವೇಳೆ ಮಾತನಾಡಿದ ಡಾ.ಭಾನುಪ್ರಕಾಶ್ ಶರ್ಮಾ ನಿರಂತರವಾಗಿ ಯೋಗ ಮಾಡುವುದರಿಂದ ಹೆಚ್ಚು ವರ್ಷ ಆರೋಗ್ಯದಿಂದ ಬದುಕಲು ಸಾಧ್ಯ ಎಂದು ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್ ಶರ್ಮಾ ಹೇಳಿದರು.
ನರೇಂದ್ರ ಮೋದಿ ವಿಶ್ವಕ್ಕೆ ಯೋಗದ ಮಹತ್ವ ತಿಳಿಸಿಕೊಟ್ಟಿದ್ದಾರೆ. ವೈಯಕ್ತಿಕ ಮತ್ತು ಸಮಾಜದ ಸ್ವಾಸ್ಥ್ಯಕ್ಕಾಗಿ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕು ಎಂದರು.

ಗಾಂಧಿವಾದಿ ಡಾ.ಬಿ. ಸುಜಯಕುಮಾರ್, ಅಮೆರಿಕಾದ ಕ್ಯಾಲಿ ಫೋರ್ನಿಯಾದಲ್ಲಿ ಭಾರತಕ್ಕಿಂ ತಲೂ ಹೆಚ್ಚು ಯೋಗ ಕೇಂದ್ರಗಳಿವೆ ಎಂದರು.

ಅಭಿನವ ಭಾರತ್ ತಂಡದ ಮಖ್ಯಸ್ಥ ಕೆ.ಎಸ್. ಲಕ್ಷ್ಮೀಶ್, ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ರಂಗಣ್ಣ, ಪುರಸಭೆ ಮಾಜಿ ಸದಸ್ಯೆ ನಳಿನಾ, ಪರಿಸರ ರಮೇಶ್ ಇದ್ದರು.

ಯೋಗ ಶಿಕ್ಷಕರಾದ ಕೆ.ಶೆಟ್ಟಹಳ್ಳಿ ಅಪ್ಪಾಜಿ, ನರಸಿಂಹ, ಶ್ರೇಯಸ್ ಯೋಗ ಹೇಳಿಕೊಟ್ಟರು.

ತಾಲ್ಲೂಕಿನ ಕರಿಘಟ್ಟ ನೀಲಾಚಲ ಸ್ನೇಹ ಬಳಗದ ಸದಸ್ಯರ ಕರಿಘಟ್ಟದ ಶ್ರೀನಿವಾಸ ದೇವಾಲಯದ ಆವರಣದಲ್ಲಿ ಯೋಗ ಪ್ರದರ್ಶಿಸಿದರು. ಡಾ.ರಾಘವೇಂದ್ರ ಅವರ ನೇತೃತ್ವದಲ್ಲಿ ವಿವಿಧ ಗ್ರಾಮಗಳ 50ಕ್ಕೂ ಹೆಚ್ಚು ಮಂದಿ ಒಂದು ತಾಸು ಯೋಗದಲ್ಲಿ ಭಾಗವಹಿಸಿದ್ದರು.

ವರದಿ: ನಾಗಯ್ಯ

SCROLL FOR NEXT