ಬೆಂಗಳೂರು: ಕೊರೋನಾ ವಾರಿಯರ್ ಸಿಲಿಕಾನ್ ಸಿಟಿ ಪೊಲೀಸರಲ್ಲಿ ಇತ್ತೀಚೆಗೆ ಕೊರೋನಾ ಸೋಂಕು ಹೆಚ್ಚಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಸಿಬ್ಬಂದಿಗಾಗಿ ಐದು ಖಾಸಗಿ ಆಸ್ಪತ್ರೆಗಳನ್ನು ಕಾಯ್ದಿರಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಕೊರೋನಾ ನಿಯಂತ್ರಣದ ಲಾಕ್ಡೌನ್ ಕಾರ್ಯಗಳನ್ನು ಪೊಲೀಸ್ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಈ ನಡುವೆ ಕರ್ತವ್ಯದಲ್ಲಿದ್ದ ಇಲಾಖೆಯ ಹಲವು ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ಪೊಲೀಸರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಹಾಗೂ ಅವರ ಆರೋಗ್ಯದ ದೃಷ್ಟಿಯಿಂದ ಗೃಹ ಇಲಾಖೆ ವಿಶೇಷ ವ್ಯವಸ್ಥೆ ಕಲ್ಪಿಸುವಂತೆ ಆದೇಶ ಹೊರಡಿಸಿದೆ.
ನಗರದಲ್ಲಿ ಪೊಲೀಸ್ ಸಿಬ್ಬಂದಿಗಾಗಿ ಐದು ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಪಾಸಿಟಿವ್ ರೋಗಿಗಳಿಗೆ ಕಾಯ್ದಿರಿಸುವುದು ಹಾಗೂ ಸಿಬ್ಬಂದಿಗಾಗಿ ಪ್ರತ್ಯೇಕವಾಗಿ ಒಂದು ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ಹಾಗೂ ಗಂಟಲು ದ್ರವ ಸಂಗ್ರಹಿಸಿದ ಸಂಚಾರಿ ವಾಹನವನ್ನು ಕಾಯ್ದಿರಿಸಬೇಕು ಎಂದು ಗೃಹ ಸಚಿವರು ಒಳಾಡಳಿತ ಇಲಾಖೆಗೆ ಆದೇಶ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಾಗಿರುವ ಪೊಲೀಸ್ ಸಿಬ್ಬಂದಿಗೆ ಉತ್ತಮ ಊಟ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುವಂತೆ ಗೃಹ ಸಚಿವರು ಸೂಚಿಸಿದ್ದಾರೆ.
ಮಹಾಮಾರಿ ಕೊರೋನಾ ವೈರಸ್ ಬೆಂಗಳೂರು ಪೊಲೀಸರನ್ನು ಬೆಂಬಿಡದೆ ಕಾಡುತ್ತಿದ್ದು, ಈವರೆಗೆ ಒಟ್ಟು 75 ಪೊಲೀಸರಿಗೆ ಸೋಂಕು ತಗುಲಿರುವುದು ದೃಢಟ್ಟಿದ್ದು, ಮೂವರು ಸಾವನ್ನಪ್ಪಿದ್ದಾರೆ.