ರಾಜ್ಯ

ಕೆ.ಸಿ. ವ್ಯಾಲಿ, ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಲು ಮುಖ್ಯಮಂತ್ರಿ ಸೂಚನೆ

Srinivas Rao BV

ಬೆಂಗಳೂರು: ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಕೆ.ಸಿ.ವ್ಯಾಲಿ ಮತ್ತು ಎತ್ತಿನಹೊಳೆ ಯೋಜನೆಗಳ ಅನುಷ್ಠಾನದ ಕುರಿತು ಚರ್ಚೆ ನಡೆಸಿತು.

ಕೆ.ಸಿ. ವ್ಯಾಲಿ ಯೋಜನೆಯಡಿ ಬೆಂಗಳೂರು ನಗರದಿಂದ 400 ಎಂ ಎಲ್ ಡಿ ಸಂಸ್ಕರಿಸಿದ ನೀರನ್ನು ಕೋಲಾರ ಜಿಲ್ಲೆಗೆ ಒದಗಿಸಬೇಕಾಗಿದೆ. ಆದರೆ ಪ್ರಸ್ತುತ ಕೇವಲ 284 ಎಂ ಎಲ್ ಡಿ ನೀರು ಮಾತ್ರ ಲಭ್ಯವಿದೆ. ಮಳೆ ನೀರು ಸಾಕಷ್ಟು ಪ್ರಮಾಣದಲ್ಲಿ ಒಳಚರಂಡಿ ಸೇರದೆ, ಸಂಸ್ಕರಣೆಗೆ ಲಭ್ಯವಾಗುತ್ತಿಲ್ಲ. ಆದ್ದರಿಂದ ಹೆಚ್ಚಿನ ನೀರು ಲಭ್ಯವಾಗಿಸಲು ಬೆಂಗಳೂರು ಜಲ ಮಂಡಳಿಯು ಕ್ರಮ ವಹಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದರು.

ಅಲ್ಲದೆ ಎಸ್ ಟಿ ಪಿಗಳ ಸಾಮರ್ಥ್ಯ ವರ್ಧನೆಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಎತ್ತಿನಹೊಳೆ ಯೋಜನೆಯಡಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ತೊಡಕು ನಿವಾರಿಸಿ, ಕಾಮಗಾರಿ ಚುರುಕುಗೊಳಿಸುವುದಾಗಿ ನಿಯೋಗದ ಸದಸ್ಯರಿಗೆ ಮುಖ್ಯಮಂತ್ರಿಯವರು ಭರವಸೆ ನೀಡಿದರು.

ಸಭೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಅಬಕಾರಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಕೆ. ನಾಗೇಶ್, ಲೋಕಸಭಾ ಸದಸ್ಯ ಎಸ್. ಮುನಿಸ್ವಾಮಿ, ವಿಧಾನನಸಭೆ ಮಾಜಿ ಅಧ್ಯಕ್ಷ ಹಾಗೂ ಶಾಸಕ ಕೆ.ಆರ್. ರಮೇಶ್ ಕುಮಾರ್ ಹಾಗೂ ಕೋಲಾರ ಜಿಲ್ಲೆಯ ಶಾಸಕರು, ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

SCROLL FOR NEXT