ರಾಜ್ಯ

ರೈಲು ಕೋಚ್ ನಲ್ಲಿ ಕುಳಿತು ಟೀ, ಕಾಫಿ ಹೀರಲು ಮೈಸೂರು ರೈಲ್ವೆ ಮ್ಯೂಸಿಯಮ್ ನಲ್ಲಿ ಅದ್ಭುತ ವ್ಯವಸ್ಥೆ

Srinivas Rao BV

ಮೈಸೂರು: ಬೇಸಿಗೆ ಕಳೆದು ಮಳೆಗಾಲ ಪ್ರಾರಂಭವಾಗುವ ದಿನಗಳು... ಹನಿ ಹನಿ ಮಳೆಯ ವಾತಾವರಣದಲ್ಲಿ ರೈಲು ಕೋಚಿನಲ್ಲಿ ಕುಳಿತು ಕಾಫಿ, ಟೀ ಹೀರುವುದಕ್ಕೆ ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ...? ಏನು ಮಾಡೊದು ಕೋವಿಡ್-೧೯ ನಿಂದಾಗಿ ರೈಲು ಹತ್ತುವುದಕ್ಕೂ ಭಯ ಆವರಿಸಿದೆ. ಆದರೆ ರೈಲು ಕೋಚಿನಲ್ಲಿ ಕುಳಿತು ಕಾಫಿ ಹೀರುವುದಕ್ಕೆ ಮೈಸೂರು ರೈಲ್ವೆ ಮ್ಯೂಸಿಯಮ್ ಅದ್ಭುತ ವ್ಯವಸ್ಥೆ ಕಲ್ಪಿಸಿದೆ.

ಹಳೆಯ ರೈಲು ಕೋಚ್ ಗಳನ್ನ ಕೆಫೆಯನ್ನಾಗಿ ಪರಿವರ್ತಿಸಲಾಗಿದೆ. ರೈಲು ಇತಿಹಾಸಕ್ಕೆ ಸಂಬಂಧಪಟ್ಟಿದ್ದನ್ನು ಸಂಗ್ರಹಿಸಿಡುವುದಕ್ಕೇ ಖ್ಯಾತಿ ಪಡೆದಿರುವ ಮೈಸೂರು ರೈಲ್ವೆ ಮ್ಯೂಸಿಯಮ್ ಇತ್ತೀಚೆಗಷ್ಟೇ ನವೀಕರಣಗೊಂಡಿತ್ತು.  ನವೀಕರಣಗೊಂಡಿದ್ದ ಟಾಯ್ ಟ್ರೈನ್ ಗೆ  ಸಾರ್ವಜನಿಕ ಪ್ರವೇಶವನ್ನು ಮುಕ್ತಗೊಳಿಸಲಾಗಿತ್ತು. ಅಷ್ಟೇ ಅಲ್ಲದೇ ಗತಕಾಲದ ಹಳೆಯ ಕೋಚ್ ಸೇರಿದಂತೆ ಇನ್ನೂ ಹಳೆಯದಾದ ರಾಜಮನೆತನದ ಗಾಡಿಗಳನ್ನು, ಇತರ ಪಾರಂಪರಿಕ ಸಾಮಗ್ರಿಗಳನ್ನು  ನವೀಕರಣಗೊಳಿಸಲಾಗಿದೆ.

ನವೀಕರಣಗೊಂಡ ಬಳಿಕ ಕೆಫೆಯನ್ನೂ ಪ್ರಾರಂಭಿಸಲಾಗಿತ್ತು. ಆದರೆ ಲಾಕ್ ಡೌನ್ ಪರಿಣಾಮವಾಗಿ ಅದನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿರಿಸಿರಲಿಲ್ಲ. ಈಗ ಲಾಕ್ ಡೌನ್ ನಿರ್ಬಂಧಗಳು ಸಡಿಲಗೊಂಡಿದ್ದು,  ಸೋಮವಾರದಂದು ಕೆಫೆ ಉದ್ಘಾಟನೆಯಾಗಿದೆ. ಸೌತ್ ವೆಸ್ಟ್ರನ್ ರೈಲ್ವೆಯ ಮಹಿಳಾ ಕಲ್ಯಾಣ ಸಂಘ ನೋ ಪ್ರಾಫಿಟ್ ನೋ ಲಾಸ್ ಮೋಡ್ ನಲ್ಲಿ ಈ ಕೆಫೆಯನ್ನು ನಿರ್ವಹಣೆ ಮಾಡುತ್ತಿದೆ. ಹಳೆಯ ಮೀಟರ್ ಗೇಜ್ ಕೋಚ್ ನಲ್ಲಿ ಮರದ ವಿಕ್ಟೋರಿಯನ್ ಅನುಭವ ನೀಡುವ ಈ ಕೆಫೆಯಲ್ಲಿ 20 ಜನರಿಗೆ ಆಸನದ ವ್ಯವಸ್ಥೆ ಇದ್ದು ಮೈಸೂರಿನ ವಿಭಾಗೀಯ ರೈಲ್ವೆ ಮ್ಯಾನೇಜರ್ ಅರ್ಪಣಾ ಗರ್ಗ್ ಉದ್ಘಾಟಿಸಿದ್ದಾರೆ. 

SCROLL FOR NEXT