ರಾಜ್ಯ

'ಕಚೇರಿಗೆ ಬಂದಿದ್ದ ಐಎಎಸ್ ಅಧಿಕಾರಿ  ವಿಜಯ ಶಂಕರ್ ಬೇಗನೇ ಮನೆಗೆ ತೆರಳಿದ್ದರು'

Shilpa D

ಬೆಂಗಳೂರು: ಆತ್ಮಹತ್ಯೆಗೆ ಶರಣಾಗಿರುವ ಹಿರಿಯ ಐಎಎಸ್ ಅಧಿಕಾರಿ ಬಿಎಂ ವಿಜಯ ಶಂಕರ್  ಬೆಂಗಳೂರು ಉತ್ತರ ವಿಭಾಗದ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಐಎಂಎ ಹಗರಣದಲ್ಲಿ ಕಳೆದ ವರ್ಷ ವಿಶೇಷ ತನಿಖಾ ತಂಡ ಅವರನ್ನು ಬಂಧಿಸಿತ್ತು.

ಐಎಂಐ ವಂಚನೆ ಪ್ರಕರಣದಲ್ಲಿ ಲಂಚ ಪಡೆದ ಆರೋಪದಲ್ಲಿ 2 ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಸಿಬಿಐ ಕೂಡ ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದು, ಇದರ ತನಿಖೆ ಪ್ರಗತಿಯಲ್ಲಿತ್ತು. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇವರ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ವಿಜಯ್ ಶಂಕರ್ ಅವರ ಸಾವಿನಿಂದ ಅವರ ಕುಟುಂಬ ಆಘಾತಕ್ಕೀಡಾಗಿದೆ, ಆತ್ಮಹತ್ಯೆಗೆ ಕಾಱಮ ಏನು ಎಂಬುದರ ಬಗ್ಗೆ ತನಿಖೆ ನಡೆಸಬೇಕಾಗಿದೆ. ಐಎಂಎ ಹಗರಣದ ಆರೋಪ ಸಂಬಂಧ ಬಂಧನಕ್ಕೊಳಗಾದ ನಂತರ ತುಂಬಾ ಖಿನ್ನತೆಗೊಳಗಾಗಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ ಎಲ್ಲಾ ನಿಟ್ಟಿನಿಂದಲೂ ತನಿಖೆ ನಡೆಸುತ್ತೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

20 ದಿನಗಳ ಹಿಂದೆ ವಿಜಯ ಶಂಕರ್ ಅವರನ್ನು ಸಕಾಲ ಇಲಾಖೆಯ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಕಚೇರಿಗೆ ತೆರಳಿದ್ದ ಅವರು ಹಲವು ಸಭೆಗಳನ್ನು ನಡೆಸಿದ್ದರು. ಮಧ್ಯಾಹ್ನ ಬೇಗನೇ ಮನೆಗೆ ಮರಳಿದ್ದರು. ಅವರು ಮತ್ತು ಪತ್ನಿ ಇಬ್ಬರೇ ಮನೆಯಲ್ಲಿದ್ದರು, ಕೊನೆಯದಾಗಿ ಸಂಜೆ 6.30ರ ವೇಳೆಗೆ ಪತ್ನಿಯ ಜೊತೆ ಮಾತನಾಡಿದ್ದಾರೆ. ಅದಾದ ನಂತರ ತಮ್ಮ ರೂಂ ಗೆ ತೆರಳಿ ಲಾಕ್ ಮಾಡಿಕೊಂಡಿದ್ದರು, 1 ಗಂಟೆಯಾದರೂ ವಾಪಸ್ ಬಾರದಿದ್ದಾಗ ಅವರ ಪತ್ನಿ ನೆರೆಹೊರೆಯವರ ಸಹಾಯದಿಂದ
ಬಾಗಿಲು ಮುರಿದಿದ್ದಾರೆ. ಬಾಗಿಲು ಮುರಿದು ನೋಡಿದಾಗ ಅಲ್ಲಿ ಅವರು ನೇಣು ಹಾಕಿಕೊಂಡಿದ್ದು ತಿಳಿದಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆಗಮಿಸಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಕಳೆದ ಜೂನ್ 10 ರಂದು ಕರ್ನಾಟಕ ಸರ್ಕಾರ ವಿಜಯ್ ಶಂಕರ್ ಅವರನ್ನು ಪ್ರಾಸಿಕ್ಯೂಷನ್ ಮಾಡಲು ಅನುಮತಿ ನೀಡಿತ್ತು. ವಿಜಯ್ ಶಂಕರ್ ಅವರೊಂದಿಗೆ ಮೂವರು ಇತರ ಅಧಿಕಾರಿಗಳ ವಿಚಾರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು.
 

SCROLL FOR NEXT